ರೈತರು, ಕಾಫಿ ಬೆಳೆಗಾರರಿಗೆ ಕೇಂದ್ರದಿಂದ ಸೌಲಭ್ಯ

8spt4
Published on

ಸೋಮವಾರಪೇಟೆ: ಕೊಡಗು ಜಿಲ್ಲೆಯ ರೈತರು ಹಾಗೂ ಕಾಫಿ ಬೆಳೆಗಾರರ ಸಮಸ್ಯೆಯ ಬಗ್ಗೆ ಅರಿವಿದ್ದು, ಕೇಂದ್ರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವುದಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.

ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಕೆಲ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ, ತೋಳೂರುಶೆಟ್ಟಳ್ಳಿ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿಯಾದ ಮಳೆಯಿಂದ ಕಾಫಿ ಫಸಲು ಹಾನಿಯಾಗುವ ಆತಂಕವನ್ನು ಬೆಳೆಗಾರರು ವ್ಯಕ್ತಪಡಿಸಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು. ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣ ಮಾಡಲಾಗುವುದು. ಪ್ರತಿ ಗ್ರಾಮಗಳಿಗೆ ಕೇಂದ್ರ ಸರ್ಕಾರದ ಅಮೃತ್-2.0 ಯೋಜನೆಯಲ್ಲಿ ಶುದ್ದ ಕುಡಿಯುವ ನೀರಿನ ಸರಬರಾಜು ಮಾಡುವ ನಿಟ್ಟಿಯನ್ನು ಕೆಲಸವಾಗುತ್ತಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿಯ ಆಡಳಿತಕ್ಕೆ 11 ವರ್ಷಗಳಾಗಿದ್ದು ದೇಶದಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ವ್ಯಾಪಕವಾಗಿ ನಡೆಯುತ್ತಿದ್ದು, ಸಂಪರ್ಕ ವ್ಯವಸ್ಥೆಯೂ ಸುಧಾರಣೆಯಾಗಿದೆ ಎಂದರು.

ಮಾಜಿ ಸಚಿವ ಅಪ್ಪಚು ರಂಜನ್ ಮಾತನಾಡಿ, ಸಿ ಮತ್ತು ಡಿ ಆದೇಶವನ್ನು ಹಿಂಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಅಕ್ರಮ-ಸಕ್ರಮದಲ್ಲಿ ರೈತರಿಗೆ ಪಟ್ಟೆ ಕೊಡುವ ಕೆಲಸ ಮಾಡಲಾಗಿತ್ತು. ಈಗ ಕಾಂಗ್ರೆಸ್ ಆಡಳಿತ ಬಂದು ಎರಡು ವರ್ಷ ಕಳೆಯಿತು. ಈಗಿನ ಸಮಿತಿ ಅಧ್ಯಕ್ಷರಾದ ಶಾಸಕರು ಒಂದು ಸಭೆಯನ್ನು ಕರೆದಿಲ್ಲ. ಪಟ್ಟೆಯನ್ನೂ ಕೊಟ್ಟಿಲ್ಲ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಹಾವಳಿ ಮಿತಿ ಮೀರಿದ್ದು, ದಿವಾಳಿಯ ಘಟ್ಟದಲ್ಲಿದೆ. ಸಚಿವರ ಕಚ್ಚಾಟದಿಂದ ಇನ್ನು ಒಂದು ವರ್ಷದಲ್ಲಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದರು.

ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರತಿವರ್ಷ ಮಳೆಯಿಂದ ಕೊಡಗಿನಲ್ಲಿ ಕಾಫಿ ಫಸಲು ಹಾನಿಯಾಗುತ್ತಿದೆ. ಕಳೆದ ಎರಡು ವರ್ಷದಿಂದ ಪರಿಹಾರ ಕೊಡುತ್ತಿಲ್ಲ. ಈ ವರ್ಷವಾದರೂ ರೈತರಿಗೆ ಮತ್ತು ಕಾಫಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪಕ್ಷದ ಮಂಡಲ ಅಧ್ಯಕ್ಷ ಗೌತಮ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ತಾಲೂಕು ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net