

ಕೈಲಾಂಚ : ವಿದ್ಯಾರ್ಥಿಗಳು ತಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದಾಗಾ ಸಾಧನೆಯ ಹಾದಿ ಕಠಿಣವಾಗಲಾರದು ಎಂದು ಕರ್ನಾಟಕ ಪಬ್ಲಿಕ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರು ತಿಳಿಸಿದರು.
ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪ್ರಮುಖಘಟ್ಟವಾಗಿದ್ದು, ನಿರ್ಭೀತಿಯಿಂದ ಪರೀಕ್ಷೆ ಬರೆಯಬೇಕು. ವಿಷಯದ ಪಾಠ ಅಂದಿನ ಪರೀಕ್ಷೆಗೆ ಮನನ ಮಾಡಿಕೊಂಡು ಪರಿಕ್ಷೆ ಬರೆದು ಹೆಚ್ಚಿನ ಅಂಕಗಳಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ, ಗ್ರಾಮಕ್ಕೆ , ತಂದೆ-ತಾಯಿಗಳಿಗೆ ಕೀರ್ತಿ ತರಬೇಕು ಎಂದರು.
ಸಮಾಜ ಸೇವಕ ಶಿವಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಇಂದು ಹತ್ತು ಹಲವು ಕ್ಷೇತ್ರಗಳಿವೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಪ್ರಗತಿ ಸಾಧಿಸಲು ಶಿಸ್ತು, ಏಕಾಗ್ರತೆ, ನಯ, ವಿನಯದಿಂದ ವಿದ್ಯಾಭ್ಯಾಸ ಮಾಡಿ ಹಿರಿಯರ ಆದರ್ಶ ಮೈಗೂಡಿಸಿಕೊಂಡು ಮುನ್ನಡೆದಾಗ ಮುಂದಿನ ಜೀವನ ಸುಖಕರವಾಗಿರುತ್ತದೆ. ಪರೀಕ್ಷೆ ಎಂಬುದು ಕಬ್ಬಿಣದ ಕಡಲೆಯಲ್ಲ ಭಯ ಬೀಳಬೇಡಿ ಶಿಕ್ಷಕರು ಹೇಳಿಕೊಟ್ಟ ಪಾಠ ಲಕ್ಷ್ಯ ಇಟ್ಟು ಮನನ ಮಾಡಿ ಧೈರ್ಯವಾಗಿ ಪರೀಕ್ಷೆ ಬರೆದು ಹೆಚ್ಚಿನ ಅಂಕಗಳಿಸಿ ಶಾಲೆಗೆ ಕೀರ್ತಿ ತನ್ನಿ ಎಂದರು.
ಡಯಟ್ ಹಿರಿಯ ಉಪನ್ಯಾಸಕ ಶಿವಕುಮಾರ್, ಸ್ವರೂಪ, ಉಪ ಪ್ರಾಂಶುಪಾಲ ಎಚ್.ಪಿ. ಮಹಾಲಿಂಗಯ್ಯ, ಸಮಾಜ ಸೇವಕ ತಮ್ಮಣ್ಣ, ಶಿಕ್ಷಕರಾದ ಪುಷ್ಪಲತಾ, ಗೀತಾ, ಮಧು, ಪೂರ್ಣಾನಂದ ಪ್ರಿಯ, ಚೈತ್ರಾ, ಕುಸುಮಾ, ಕವಿತಾ, ಗೋವಿಂದಯ್ಯ ಇದ್ದರು.