ವಧುವರರಿಗಾಗಿ ಮಾರುಕಟ್ಟೆಗೆ ಬಂತು ಬೆಳ್ಳಿಯ ಮಾಸ್ಕ್!

Silver Mask
Published on

ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಈಗ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಸರ್ಕಾರಿ ಮಾರ್ಗಸೂಚಿ ಅನುಸಾರ, ಸರಳವಾಗಿ ವಿವಾಹವಾಗುವ ಜೋಡಿಯೂ ಮಾಸ್ಕ್ ಧರಿಸದೇ ಹಸೆಮಣೆ ಏರುವಂತಿಲ್ಲ.

ಇದನ್ನು ಮನಗಂಡ ಮಹಾರಾಷ್ಟ್ರದ ಕೊಲ್ಹಾಪುರದ ಆಭರಣ ವ್ಯಾಪಾರಿಯೊಬ್ಬರು, ವಧು-ವರನಿಗಾಗಿ ಬೆಳ್ಳಿ ಮಾಸ್ಕ್ ತಯಾರಿಸಿದ್ದಾರೆ. 50 ಗ್ರಾಂ. ಬೆಳ್ಳಿಯಲ್ಲಿ ತಯಾರಿಸಿದ ಮಾಸ್ಕ್‌ಗೆ ತಲಾ 2,500 ರೂ. ದರ ನಿಗದಿಪಡಿಸಲಾಗಿದೆ.

‘ಕರೊನಾ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದೆವು. 3ನೇ ಹಂತದ ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ಅಂಗಡಿ ತೆರೆಯಲು ಸರ್ಕಾರ ಅವಕಾಶ ಕೊಟ್ಟರೂ, ಖರೀದಿಗೆ ಗ್ರಾಹಕರು ಇರಲಿಲ್ಲ. ಆದರೆ, ಲಾಕ್‌ಡೌನ್ ಇದ್ದರೂ ಸರಳವಾಗಿ ವಿವಾಹಗಳು ನೆರವೇರುತ್ತಿವೆ. ಹಾಗಾಗಿ, ವಧು-ವರನಿಗಾಗಿ ಆಕರ್ಷಕ ಮಾಸ್ಕ್ ತಯಾರಿಸಬಹುದೇ ಎನ್ನುವ ಆಲೋಚನೆ ಬಂತು. ತಡಮಾಡದೇ ಮೂವರು ಕಾರ್ಮಿಕರೊಂದಿಗೆ ತಯಾರಿಸಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಒಂದು ವಾರದೊಳಗೆ ಮೂರು ಜೋಡಿ ಮಾಸ್ಕ್ ಖರೀದಿಸಿದ್ದಾರೆ. ಈಗ ಎರಡು ಜೋಡಿಯಿಂದ ಮಾಸ್ಕ್ ಖರೀದಿಗೆ ಬೇಡಿಕೆ ಬಂದಿದೆ’ ಎಂದು ಆಭರಣ ವ್ಯಾಪಾರಿ ಸಂದೀಪ ಸಾಂಗಾವಕರ ‘ವಿಜಯವಾಣಿ’ಗೆ ತಿಳಿಸಿದರು.

‘ಆಭರಣ ವ್ಯಾಪಾರಿಗಳು ಗ್ರಾಹಕರೇ ಇಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಬದಲಿಗೆ, ಜನರ ಮನದಾಳ ಅರಿತು ನಾವೇ ವ್ಯಾಪಾರಕ್ಕೆ ಪೂರಕವಾಗಿ ಅವಕಾಶ ಸೃಷ್ಟಿಸಿಕೊಳ್ಳಬೇಕು’ ಎನ್ನುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net