

ಕೈಲಾಂಚ: ಮನುಷ್ಯನ ಕಣ್ಣುಗಳು ಆರೋಗ್ಯದಿಂದ ಇದ್ದಾಗ ಮಾತ್ರ ಕೆಲಸ ಕಾರ್ಯಗಳಲ್ಲಿ ತೊಡಗಿ ಉತ್ತಮ ಬದುಕು ಸಾಗಿಸಬಹುದು ಎಂದು ಚನ್ನಮಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಕುಮಾರ್ ತಿಳಿಸಿದರು.
ಕೈಲಾಂಚ ಹೋಬಳಿಯ ಚನ್ನಮಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಬೆಂಗಳೂರಿನ ಡಾ.ಸೋಲಂಕಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಡೇರಿ ಆವರಣದಲ್ಲಿ ಆಯೋಜಿಸಿದ್ದ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೈತರ ಕಣ್ಣಿನ ಆರೋಗ್ಯ ದೃಷ್ಟಿಯಿಂದ ಈ ಶಿಬಿರವನ್ನು ಪ್ರಾಯೋಜಿಸಲಾಗಿದೆ. ಸಕಾಲದಲ್ಲಿ ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡು ಉತ್ತಮ ದೃಷ್ಟಿಯುಳ್ಳವರಾಗಬೇಕು. ಶಿಬಿರದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಡಾ.ಸೋಲಂಕಿ ಕಣ್ಣಿನ ಆಸ್ಪತ್ರೆಯ ಹಿರಿಯ ತಂತ್ರಜ್ಞ ಬಿ.ಎಸ್.ಕೋದಂಡರಾಮ್ ಮಾತನಾಡಿ, ವಯಸ್ಸಾದಂತೆ ಸಾಮಾನ್ಯವಾಗಿ ಕಣ್ಣಿನಲ್ಲಿ ಪೊರೆ ಮೂಡುವುದು ಸಹಜ. ಸಾರ್ವಜನಿಕರು ತಮ್ಮ ಕಣ್ಣಿನ ಬಗ್ಗೆ ಉದಾಸೀನತೆ ತೋರದೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆದು ಕಣ್ಣನ್ನು ರಕ್ಷಿಸಿಕೊಳ್ಳಬಹುದು. ಕಣ್ಣಿನ ಶಸ್ತ್ರಚಿಕಿತ್ಸೆ ಬಹಳ ಸರಳವಾಗಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡಲಾಗುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು.
ಸಂಘದ ಉಪಾಧ್ಯಕ್ಷೆ ಚಂದ್ರಮ್ಮ, ನಿರ್ದೇಶಕರಾದ ಉಮಾ, ಶಿವಣ್ಣ, ಮುಖ್ಯಕಾರ್ಯನಿರ್ವಾಹಕ ಅರ್ಕೇಶ್, ಹಾಲು ಪರೀಕ್ಷಕ ಸಿ.ಪಿ. ಕುಮಾರ್, ಸಿಬ್ಬಂದಿ ಲಕ್ಷ್ಮಣ, ಶಿವಕುಮಾರ್ ಇದ್ದರು.