

ಮುಂಡರಗಿ: ಪಟ್ಟಣದಲ್ಲಿ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ನಿಮಿತ್ತ ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಎಂ.ಎಂ. ಜೋಶಿ ದೃಷ್ಟಿ ಕೇಂದ್ರ, ಆರೋಗ್ಯ ಇಲಾಖೆ ಹಾಗೂ ವಿವಿಧ ಕಾಲೇಜ್ಗಳ ಆಶ್ರಯದಲ್ಲಿ ಶುಕ್ರವಾರ ಜಾಗೃತಿ ಜಾಥಾ ನಡೆಯಿತು.
ಜಾಥಾಗೆ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಚಾಲನೆ ನೀಡಿದರು. ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಿಂದ ಭೀಮರಾಯ ವೃತ್ತದವರೆಗೆ (ಕೊಪ್ಪಳ ಸರ್ಕಲ್) ಜಾಥಾ ನಡೆಸಲಾಯಿತು.
ಎಂ.ಎಂ. ಜೋಶಿ ನೇತ್ರವಿಜ್ಞಾನ ಸಂಸ್ಥೆ ಸಿಇಒ ಕುತುಬುದ್ದಿನ್ ಮುಲ್ಲಾ ಮಾತನಾಡಿ, ದೇಶದಲ್ಲಿ 1.5 ಕೋಟಿ ಅಂಧರಿದ್ದಾರೆ. 68 ಲಕ್ಷ ಜನರು ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. 10 ಲಕ್ಷ ಜನರು ಎರಡು ಕಣ್ಣಿನ ಅಂಧರಿದ್ದಾರೆ. ಆದ್ದರಿಂದ ಜಾಥಾ ಮೂಲಕ ನೇತ್ರದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಜಾಥಾದಲ್ಲಿ ಮಿಷನ್ ಇಂದ್ರಧನುಷ್ 5.0 ಲಸಿಕಾ ವಂಚಿತ ಮಕ್ಕಳಿಗೆ ಲಸಿಕಾ ಅಭಿಯಾನ ನಡೆಸಲಾಯಿತು. ಟಿಎಚ್ಒ ಡಾ. ಲಕ್ಷ್ಮಣ ಪೂಜಾರ, ವೈದ್ಯ ಡಾ. ಜಯಕುಮಾರ ಬ್ಯಾಳಿ, ನೇತ್ರಾಧಿಕಾರಿ ಇಂದ್ರೇಶ್, ರಾಘವೇಂದ್ರ ಕೆಳಗಾರ, ದೀಪಾ ದೊಂಗಡೆ, ವಿಕ್ರಮ್ ಗುಡಿಗೇರಿ, ಮಂಜುಳಾ ಸಜ್ಜನರ, ಬಸವರಾಜ ಜೋಗಿನ್, ಬಿ.ಪಿ. ಮಟ್ಟಿ, ಎಂ.ಪಿ. ಶೀರನಹಳ್ಳಿ, ಡಿ.ಎಚ್. ನಿಂಗರೆಡ್ಡಿ ಹಾಗೂ ವಿವಿಧ ಕಾಲೇಜ್ಗಳ ವಿದ್ಯಾರ್ಥಿಗಳು ಇತರರಿದ್ದರು.