

ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಎಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆ, ರೋಟರಿ ಮಿಡ್-ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಎಚ್.ಕೆ.ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ದಿ.ಎಚ್.ಕೃಷ್ಣಸ್ವಾಮಿ ಅವರ ಆಶಯದಂತೆ ಎಚ್.ಕೆ. ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಾ ಬಂದಿದ್ದೇವೆ. ಕಳೆದ 30 ತಿಂಗಳಿನಿಂದ ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತ ಬಂದಿದ್ದು, ಸಾವಿರಾರು ಜನರು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.
ಎಚ್.ಕೆ ಟ್ರಸ್ಟ್ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶವನ್ನು ಹೊಂದಿದೆ. ಕಣ್ಣಿನ ಆರೋಗ್ಯದ ಮೇಲೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಇಂತಹ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಈ ಶಿಬಿರದಲ್ಲಿ 70ಜನರು ತಪಾಸಣೆಗೆ ಒಳಪಟ್ಟಿದ್ದು, ಅದರಲ್ಲಿ 23 ಜನರನ್ನು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತ್ತೂರಿಗೆ ಕಳುಹಿಸಿ ಕೊಡಲಾಯಿತು.
ಕಾರ್ಯಕ್ರಮದಲ್ಲಿ ಅರವಿಂದ ಕಣ್ಣಿನ ಆಸ್ಪತ್ರೆಯ ಡಾ. ಕಪಿಲ್, ಡಾ.ಚೇತನ್, ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕ ವಿಜಯ್ ಕುಮಾರ್ ,ಎಚ್.ಕೆ ಟ್ರಸ್ಟ್ ನ ರವಿತೇಜ, ಸಂಸ್ಥೆಯ ಸಿಬ್ಬಂದಿ ಗಾಯತ್ರಿ, ಕುಮಾರಿ, ಚೈತ್ರಾ, ಜ್ಯೋತಿ ಲಿಂಗಯ್ಯ, ಮೋಹನ್ ಮತ್ತಿತರಿದ್ದರು.