

ಚಿಂತಾಮಣಿ: ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತವೆ ಮತ್ತು ಅವರಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದು ಮುಖ್ಯಶಿಕ್ಷಕ ಎಸ್.ಎನ್.ರಂಗನಾಥ ಹೇಳಿದರು.
ತಾಲೂಕಿನ ಆಲಂಬಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿರಿಗನ್ನಡ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಂಭ್ರಮದಲ್ಲಿ ಕನ್ನಡ ಗೀತೆಗಳ ಗಾಯನ, ಕವಿಗಳ ಪರಿಚಯ ಮತ್ತು ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಶಾಲೆಗಳಲ್ಲಿ ಕನ್ನಡದ ವಾತಾವರಣ ಸೃಷ್ಟಿಸಲು ಮತ್ತು ಭಾಷಾ ಬೆಳವಣಿಗೆಗೆ ಕನ್ನಡಪರ ವೇದಿಕೆಗಳು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಸಿರಿಗನ್ನಡ ವೇದಿಕೆ ಮತ್ತು ಕಸಾಪ ತಾಲೂಕು ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ಮಾತನಾಡಿ, ಸಿರಿಗನ್ನಡ ವೇದಿಕೆಯು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಹೆಚ್ಚು ಒತ್ತು ನೀಡಿ, ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಪರಿಚಯ ಮಾಡಿಸುತ್ತಿದೆ ಎಂದರು.
ನಗರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಸರಸ್ವತಿ ಮಾತನಾಡಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು.
ಸಿರಿಗನ್ನಡ ವೇದಿಕೆ ಉಪಾಧ್ಯಕ್ಷ ಟಿ.ಸಿ.ಲಕ್ಷ್ಮೀಪತಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ನಿವೃತ್ತ ಮುಖ್ಯಶಿಕ್ಷಕ ರೆಡ್ಡಿರಮೇಶ್, ಶಿಕ್ಷಕರಾದ ನಾರಾಯಣಸ್ವಾಮಿ, ಗಾಯತ್ರಿ, ಪ್ರಶಾಂತ್ ಇದ್ದರು.