ಉಗ್ರರ ಮಟ್ಟಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬಲ: ಬೆಂಗಳೂರಲ್ಲಿ ಶಾಶ್ವತ ಕಚೇರಿ ಆರಂಭ

NIA
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ದೇಶದಲ್ಲಿ ಉಗ್ರ ಚಟುವಟಿಕೆ ಶೂನ್ಯ ಪ್ರಮಾಣಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ, ಇನ್ನಷ್ಟು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಪ್ರಾದೇಶಿಕ ಕಚೇರಿಗಳನ್ನು ತೆರೆಯಲು ಅನುಮೋದನೆ ಕೊಟ್ಟಿದೆ. ಬೆಂಗಳೂರಲ್ಲಿ ಶಾಶ್ವತ ಎನ್​ಐಎ ಕಚೇರಿ ಆರಂಭವಾಗಿದೆ. ಇದರೊಂದಿಗೆ ದೇಶಾದ್ಯಂತ 18 ಪ್ರಮುಖ ನಗರಗಳಲ್ಲಿ ಎನ್​ಐಎ ಶಾಶ್ವತ ಪ್ರಾದೇಶಿಕ ಕಚೇರಿಗಳ ಸ್ಥಾಪನೆಯಾಗುವ ಮುಖೇನ ಭಯೋತ್ಪಾದಕತೆ ವಿರುದ್ಧದ ಕಾರ್ಯಾಚರಣೆಗೆ ಬಲ ದೊರೆತಿದೆ. ಭಯೋತ್ಪಾದಕ ಚಟುವಟಿಕೆ ಹೆಚ್ಚಿರುವಂತಹ ಬೆಂಗಳೂರು, ಅಹಮದಾಬಾದ್, ಪಾಟ್ನ, ಜೈಪುರ, ಭೋಪಾಲ್ ಮತ್ತು ಭುವನೇಶ್ವರದಲ್ಲಿ ಎನ್​ಐಎ ಪ್ರಾದೇಶಿಕ ಕಚೇರಿಗಳ ಆರಂಭಿಸಲು ಕೇಂದ್ರ ಸರ್ಕಾರ 2022 ಜ.5ರಂದು ಅನುಮತಿ ಕೊಟ್ಟಿತ್ತು. ಈಗ ಬೆಂಗಳೂರಿನ ದೊಮ್ಮಲೂರಿನಲ್ಲಿ ಕಚೇರಿ ಆರಂಭವಾಗಿದ್ದು, ಒಂದು ವಾರದಿಂದ ಕಾರ್ಯಾರಣೆ ಶುರು ಮಾಡಿದೆ. ಒಬ್ಬರು ಎಸ್​ಪಿ, ಮೂವರು ಇನ್​ಸ್ಪೆಕ್ಟರ್​ಗಳು ಅಧಿಕಾರ ವಹಿಸಿಕೊಂಡಿದ್ದು, 10 ಕಚೇರಿ ಸಿಬ್ಬಂದಿಯ ನೇಮಕವಾಗಿದೆ. ಬೆಂಗಳೂರು ಕಚೇರಿಗೆ 52 ಹುದ್ದೆಗಳ ನೇಮಕಕ್ಕೆ ಕೇಂದ್ರದ ಗೃಹ ಸಚಿವಾಲಯ ಮಂಜೂರಾತಿ ನೀಡಿದೆ. ಆರಂಭಿಕ ಹಂತದಲ್ಲಿ ನಾಲ್ವರು ಅಧಿಕಾರಿಗಳು ಸೇರಿ 14 ಜನರನ್ನು ಮಾತ್ರ ನಿಯೋಜಿಸಲಾಗಿದೆ. ಕಚೇರಿಗೆ ಡಿಐಜಿ ದರ್ಜೆ ಅಧಿಕಾರಿ ಮುಖ್ಯಸ್ಥರಾಗಿರಲಿದ್ದು, ಶೀಘ್ರದಲ್ಲೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಉಳಿದಂತೆ ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ, ಸಬ್ ಇನ್​ಸ್ಪೆಕ್ಟರ್ ಸೇರಿ ಉಳಿದ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ಎನ್​ಐಎ ಮೂಲಗಳು ಮಾಹಿತಿ ನೀಡಿವೆ. ಬೆಂಗಳೂರಲ್ಲಿ ಉಗ್ರ ಕೃತ್ಯ ನಡೆದಾಗ ಅಥವಾ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ದೆಹಲಿ, ಚೆನ್ನೈ ಅಥವಾ ಬೇರೆ ನಗರಗಳಿಂದ ಎನ್​ಐಎ ತಂಡ ಇಲ್ಲಿಗೆ ಬಂದು ತನಿಖೆ ನಡೆಸಬೇಕಿತ್ತು. 2016-2021ರ ಜುಲೈ 29ರವರೆಗೆ ರಾಜ್ಯದಲ್ಲಿ ಉಗ್ರ ಕೃತ್ಯ ಸಂಬಂಧಿತ 15 ಕೇಸ್​ಗಳನ್ನು ಎನ್​ಐಎ ತಂಡ ತನಿಖೆ ನಡೆಸುತ್ತಿದೆ. ಇದರಲ್ಲಿ 31 ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಅನುಕೂಲವೇನು?
  • ಕರ್ನಾಟಕದಲ್ಲಿ ಉಗ್ರ ಚಟುವಟಿಕೆಗಳ ಬಗ್ಗೆ ತನಿಖೆಗೆ ಸಹಾಯ
  • ರಾಜ್ಯದಲ್ಲಿ ಅಡಗಿರುವ ಉಗ್ರರ ಮಾಹಿತಿ ಕಲೆಹಾಕಲು, ಬಂಧಿಸಲು ನೆರವು
  • ಭಯೋತ್ಪಾದನೆ ಕೇಸ್​ಗಳ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ಸಾಧ್ಯ
  • ಉಗ್ರರ ಸಂಚಿನ ಬಗ್ಗೆ ಇಂಟಲಿಜೆನ್ಸ್ ಮಾಹಿತಿ ಆಧರಿಸಿ ತನಿಖೆ ನಡೆಸಲು ಅನುಕೂಲ

2008ರಲ್ಲಿ ಆರಂಭ: 2008ರಲ್ಲಿ ಮುಂಬೈ ನಗರದ ಮೇಲೆ ಪಾಕಿಸ್ತಾನದ ಭಯೋತ್ಪಾದ ಕರು ದಾಳಿ ನಡೆಸಿದ ಬಳಿಕ ದೇಶದಲ್ಲಿ ಭಯೋತ್ಪಾ ದನಾ ಕೃತ್ಯಗಳ ತನಿಖೆ, ವಿಚಾರಣೆ ನಡೆಸಲೆಂದೇ ಎನ್​ಐಎ ರಚಿಸಲಾಗಿದೆ. ಈ ತನಿಖಾ ದಳವು ಭಯೋತ್ಪಾದನಾ ಕೃತ್ಯಗಳಿಗೆ ಮಾತ್ರ ಸೀಮಿತವಾಗಿದ್ದು, ಭಯೋತ್ಪಾದನಾ ಕೇಸ್​ಗಳ ತನಿಖೆಯಲ್ಲಿ ಅನುಭವ ಹೊಂದಿರುವ ಅಧಿಕಾರಿ ಗಳನ್ನೇ ಎನ್​ಐಎಗೆ ನೇಮಕ ಮಾಡಲಾಗುತ್ತದೆ.

ಎಲ್ಲೆಲ್ಲಿ ಕಚೇರಿಗಳಿವೆ?: ನವದೆಹಲಿಯಲ್ಲಿ ಪ್ರಧಾನ ಎನ್​ಐಎ ಪ್ರಧಾನ ಕಚೇರಿ ಇದೆ. ಹೈದರಾಬಾದ್, ಗುವಾಹಟಿ, ಇಂಫಾಲ್, ಕೊಚ್ಚಿ, ಚೆನ್ನೈ, ಲಖನೌ, ಕೊಲ್ಕತ್ತ, ಜಮ್ಮು, ರಾಯಪುರ, ಚಂಡೀಗಡ, ರಾಂಚಿ, ಮುಂಬೈ, ಬೆಂಗಳೂರು, ಭೋಪಾಲ್, ಪಟನಾ, ಅಹಮದಾಬಾದ್ ಭುವನೇಶ್ವರ ಮತ್ತು ಜೈಪುರ.

ಹಲವು ವರ್ಷಗಳ ಬೇಡಿಕೆ: ಕರ್ನಾಟಕ ಉಗ್ರರ ಸ್ಲೀಪರ್ ಸೆಲ್ ಆಗಿದೆ ಎಂಬುದು ಈವರೆಗೆ ದಾಖಲಾಗಿರುವ ಪ್ರಕರಣಗಳು ಹಾಗೂ ಶಂಕಿತ ಉಗ್ರರ ಬಂಧನದಿಂದ ರುಜುವಾತಾಗಿದೆ. ಆದ್ದರಿಂದ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಕಣ್ಣಿಡಲು ಹಾಗೂ ಹತ್ತಿಕ್ಕಲು ರಾಜ್ಯಕ್ಕೆ ಶಾಶ್ವತ ಎನ್​ಐಎ ಕಚೇರಿ ಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇತ್ತು. ಅದರ ಫಲವಾಗಿ ಕೊನೆಗೂ ಬೆಂಗಳೂರಲ್ಲಿ ಎನ್​ಐಎ ಕಚೇರಿ ಕಾರ್ಯಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net