

ನರೇಗಲ್ಲ:ಪಟ್ಟಣ ಸೇರಿ ಹೋಬಳಿಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಜಿಟಿಜಿಟಿ ಮಳೆಯ ಕಾರಣ ಜನರು ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ವಣವಾಗಿದೆ. ಪಟ್ಟಣ ಸೇರಿ ಗ್ರಾಮೀಣ ಭಾಗದ ರಸ್ತೆಗಳು ಕೆಸರುಮಯವಾಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ.
2 ಕೋಟಿ ಮೊತ್ತದ ದ್ವಿಪಥ ರಸ್ತೆ ನೀರಿನಲ್ಲಿ ಹೋಮ:
ಪಟ್ಟಣದ ಬಸ್ ನಿಲ್ದಾಣದಿಂದ ಶ್ರೀ ಅನ್ನದಾನ ವಿಜಯ ಕಾಲೇಜ್ವರೆಗೆ ಲೋಕೋಪಯೋಗಿ ಇಲಾಖೆಯಿಂದ ನಿರ್ವಣವಾದ 2 ಕೋಟಿ ರೂ. ಗಳ ರಸ್ತೆ ಸಂಪೂರ್ಣ ಹಾಳಾಗಿದೆ. ಹೆಸರಿಗೆ ಮಾತ್ರ ದ್ವಿಪಥ ಇದಾಗಿದ್ದು, ಹಿರೇಕೆರೆಯ ಭಾಗದ ರಸ್ತೆಯು ತಗ್ಗು ಬಿದ್ದು ಕೆರೆಯಂತಾಗಿದೆ.
ನೆಗಡಿ, ಕೆಮ್ಮು, ಜ್ವರ ಉಲ್ಬಣ:
ಎರಡು ದಿನದಿಂದ ತಂಪಾದ ವಾತಾವರಣ ನಿರ್ವಣವಾಗಿದ್ದು, ನೆಗಡಿ, ಕೆಮ್ಮು ಮತ್ತು ಜ್ವರಗಳು ಸಾಮಾನ್ಯವಾಗಿದೆ. ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ.
ಅಳಿದುಳಿದ ಹೆಸರು ಕೈ ಸೇರದ ಸ್ಥಿತಿ:
ಹೋಬಳಿಯ ಪ್ರಮುಖ ಮುಂಗಾರಿನ ವಾಣಿಜ್ಯ ಬೆಳೆ ಹೆಸರು ಬೆಳೆಗೆ ಸಕಾಲಕ್ಕೆ ಮಳೆಯಾಗದೇ ಸಾಕಷ್ಟು ಪ್ರಮಾಣದಲ್ಲಿ ನಾಶವಾಗಿದೆ. ಅಳಿದುಳಿದ ಬೆಳೆಯಾದರೂ ಕೈ ಹಿಡಿಬಹುದೆಂಬ ಆಸೆಯಲ್ಲಿದ್ದ ರೈತರಿಗೆ ಜಿಟಿಜಿಟಿ ಮಳೆ ಶಾಪವಾಗಿ ಪರಿಣಮಿಸಿದೆ. ತೇವಾಂಶದ ಹೆಚ್ಚಳದಿಂದಾಗಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ಪ್ರಸಕ್ತ ಸಾಲಿನ ಮುಂಗಾರಿನ ಸಂಪೂರ್ಣ ಬೆಳೆ ಹಾಳಾದಂತಾಗಿದೆ.
ಜಿಟಿಜಿಟಿ ಮಳೆಯಿಂದ ಹೆಸರು ರೋಗಕ್ಕೆ ಹಳದಿ ರೋಗ ಕಾಣಿಸಿಕೊಂಡಿದೆ. ಹಳದಿ ಎಲೆ ರೋಗವು ಮುಂಗ್ಲಿನ್ ಎಲ್ಲೊ ಮೋಸಾಯಿಕ್ ವೈರಸ್ನಿಂದ ಬರುತ್ತದೆ. ಆರಂಭದಲ್ಲಿ ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ . ಮೊದಲು ಒಂದೆರೆಡು ಗಿಡಗಳಲ್ಲಿ ಕಾಣಿಸಿಕೊಳ್ಳುವ ಈ ರೋಗ ಜಮೀನಿನ ತುಂಬ ಹರಡುತ್ತದೆ. ಹಳದಿ ರೋಗ ಕಾಣಿಸಿಕೊಂಡ ಗಿಡಗಳನ್ನು ಕಿತ್ತು ಮಣ್ಣಿನಲ್ಲಿ ಹೂಳಬೇಕು ಅಥವಾ ಸುಟ್ಟು ಹಾಕಬೇಕು. - ರವೀಂದ್ರಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ