ಚೆನ್ನೈ- ಮಂಗಳೂರು ರೈಲನ್ನು ಕಾರವಾರದವರೆಗೆ ವಿಸ್ತರಿಸಿ

13KWR1
Published on

ಕಾರವಾರ: ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಸೂಪರ್ ಫಾಸ್ಟ್ ರೈಲನ್ನು ಉತ್ತರ ಕನ್ನಡ ಜಿಲ್ಲೆಯ ಮುರ್ಡೆಶ್ವರದವರೆಗೆ ವಿಸ್ತರಿಸುವ ಸಂಬಂಧ ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆ ನಿಗಮಗಳ ನಡುವೆ ಪತ್ರ ವ್ಯವಹಾರ ನಡೆದಿದೆ. ಆದರೆ, ಈ ರೈಲನ್ನು ಕಾರವಾರದವರೆಗೆ ಅಥವಾ ಕನಿಷ್ಠ ಕುಮಟಾದವರೆಗಾದರೂ ವಿಸ್ತರಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.
ಚೆನ್ನೈನಿಂದ ಪ್ರತಿ ದಿನ ಸಂಜೆ 4.20ಕ್ಕೆ ಹೊರಡುವ ರೈಲು 12685 ಮರುದಿನ ಬೆಳಗ್ಗೆ 7.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ನಂತರ ಮಧ್ಯಾಹ್ನ 4.55ಕ್ಕೆ ಮಂಗಳೂರು ಸೆಂಟ್ರಲ್​ನಿಂದ ಹೊರಡುವ ರೈಲು-12686 ಮರುದಿನ ಬೆಳಗ್ಗೆ 8.05ಕ್ಕೆ ಚೆನ್ನೈ ತಲುಪಲಿದೆ.
ಚೆನ್ನೈನಿಂದ ಬರುವ ರೈಲನ್ನು ಇಡೀ ದಿನ ಮಂಗಳೂರಿನಲ್ಲಿ ನಿಲ್ಲಿಸುವ ಬದಲು ಮುರ್ಡೆಶ್ವರದವರೆಗೆ ಓಡಿಸಬಹುದು ಎಂಬುದು ದಕ್ಷಿಣ ರೈಲ್ವೆ ಯೋಜನೆ. ಈ ಸಂಬಂಧ ಕೊಂಕಣ ರೈಲ್ವೆಯೊಂದಿಗೆ ಮಾತುಕತೆ ನಡೆದಿದೆ. ಕೊಂಕಣ ರೈಲ್ವೆ ರೈಲು ಓಡಾಟದ ಬಗ್ಗೆ ಸಾಧ್ಯತಾ ವರದಿಯೊಂದನ್ನೂ ನೀಡಿದೆ. ಕುಮಟಾವರೆಗೆ ವಿಸ್ತರಿಸುವಂತೆಯೂ ಮನವಿ ಮಾಡಿದೆ ಎನ್ನಲಾಗಿದೆ.
ಬೆಳಗ್ಗೆ 7.20ಕ್ಕೆ ಮಂಗಳೂರು ಸೆಂಟ್ರಲ್​ನಿಂದ ಬಿಡುವ ರೈಲು-12685 11.10ಕ್ಕೆ ಮುರ್ಡೆಶ್ವರ ತಲುಪಲಿದೆ. ನಂತರ 11.50ಕ್ಕೆ ಮುರ್ಡೆಶ್ವರದಿಂದ ವಾಪಸ್ ಬಿಡುವ ರೈಲು ಸಂಜೆ 4 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. 4.55ಕ್ಕೆ ಚೆನ್ನೈ ಕಡೆಗೆ ಹೊರಡಲಿದೆ ಎಂದು ಸಾಧ್ಯತಾ ವರದಿ ಸಲ್ಲಿಸಿದೆ ಎನ್ನಲಾಗಿದೆ.

ಕಾರವಾರದವರೆಗೆ ವಿಸ್ತರಿಸಿ: ಕೇವಲ ಮುರ್ಡೆಶ್ವರದವರೆಗೆ ರೈಲನ್ನು ವಿಸ್ತರಿಸುವುದರಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. ಕಾರವಾರದವರೆಗೆ ರೈಲು ವಿಸ್ತರಿಸಿದರೆ, ಜಿಲ್ಲೆಯ ಕರಾವಳಿಗೆ ಅನುಕೂಲವಾಗಲಿದೆ. ಇಲ್ಲವೇ ಕನಿಷ್ಠ ಕುಮಟಾದವರೆಗಾದರೂ ರೈಲನ್ನು ವಿಸ್ತರಿಸಬೇಕು ಎಂಬುದು ರೈಲ್ವೆ ಪ್ರಯಾಣಿಕರ ಒತ್ತಾಯ.

ಚೆನ್ನೈ-ಮಂಗಳೂರು ರೈಲನ್ನು ವಿಸ್ತರಿಸುವ ಬಗ್ಗೆ ಮಾತುಕತೆ ನಡೆದಿದ್ದು ಸತ್ಯ. ಆದರೆ, ಕುಮಟಾದವರೆಗೆ ವಿಸ್ತರಿಸಬೇಕೋ ಅಥವಾ ಮುರ್ಡೆಶ್ವರದವರೆಗೆ ವಿಸ್ತರಿಸಬೇಕೋ ಎಂಬುದು ಇದುವರೆಗೂ ಅಂತಿಮವಾಗಿಲ್ಲ.| ಬಿ.ಬಿ. ನಿಕ್ಕಂ ಆರ್​ಆರ್​ಎಂ ಕಾರವಾರಚೆನ್ನೈ-ಮಂಗಳೂರು ರೈಲನ್ನು ಮುರ್ಡೆಶ್ವರದವರೆಗೆ ವಿಸ್ತರಿಸುವುದರಿಂದ ಜಿಲ್ಲೆಯ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಈ ಪ್ರಸ್ತಾವವನ್ನು ಕೊಂಕಣ ರೈಲ್ವೆ ಒಪ್ಪಿಕೊಳ್ಳಬಾರದು. ರೈಲನ್ನು ಕಾರವಾರ ಅಥವಾ ಕನಿಷ್ಠ ಕುಮಟಾದವರೆಗಾದರೂ ವಿಸ್ತರಿಸಬೇಕು.| ರಾಜೀವ ಗಾಂವಕರ್ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿಈ ವಿಷಯ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ಚೆನ್ನೈ-ಮಂಗಳೂರು ರೈಲನ್ನು ಕಾರವಾರದರೆಗೆ ವಿಸ್ತರಿಸುವಂತೆ ಮನವಿ ಮಾಡುತ್ತೇನೆ.| ದಿನಕರ ಶೆಟ್ಟಿಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net