

ಹಲಗೂರು: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ಅವರ ಕಲ್ಪನಾ ಶಕ್ತಿ ಮತ್ತು ಮೇಧಾ ಶಕ್ತಿ ಹೆಚ್ಚಿಸುವುದರ ಜತೆಗೆ ಅಧ್ಯಯನಶೀಲತೆ ಬೆಳೆಯಲು ಸಹಕಾರಿಯಾಗಲಿದೆ ಎಂದು ಕೆರಗೋಡ ಮಾಧವ ವಿದ್ಯಾಲಯದ ಕಾರ್ಯದರ್ಶಿ ಶ್ರೀಪತಿ ತಿಳಿಸಿದರು.
ಚನ್ನಪಟ್ಟಣ ರಸ್ತೆಯಲ್ಲಿರುವ ಜೆಜೆ ಪಬ್ಲಿಕ್ ಶಾಲಾ ಆವರಣದಲ್ಲಿ 2024- 2025ನೇ ಸಾಲಿನ ಎರಡು ದಿನಗಳ ಶೈಕ್ಷಣಿಕ ಚಟುವಟಿಕೆ ವಸ್ತುಪ್ರದರ್ಶನವನ್ನು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಮಾಡಲು ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು. ವಸ್ತುಗಳನ್ನು ಹೇಗೆ ಜೋಡಿಸಿಕೊಳ್ಳಬೇಕು. ಮುಂದೆ ಏನನ್ನಾದರೂ ಸಾಧಿಸಬಹುದು ಎಂಬ ಪ್ರವೃತ್ತಿ ಬೆಳೆಸಲು ಈ ವಸ್ತುಪ್ರದರ್ಶನ ಸಹಕಾರಿ ಆಗಲಿದೆ ಎಂದರು.
ಶಾಲೆಯ ಪ್ರಾಂಶುಪಾಲೆ ಲಲಿತಾಂಬ ಸೋಮಶೇಖರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ವಿಶೇಷವಾಗಿ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಪ್ರಿಕೆಜಿಯಿಂದ ಮೂರನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕಿಡ್ಸೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನವಾದ ಶನಿವಾರ 4ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ ವಿಶೇಷವಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಪಾಲಕರು ಹಾಗೂ ಸಾರ್ವಜನಿಕರು ವಸ್ತುಪ್ರದರ್ಶನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಲ ವಿಷಯದ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು. ಇದರಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳು, ಸೋಲಾರ್ ಆಧಾರಿತ ಮಾದರಿಗಳು, ಪೈಥಾಗೋರಸ್ ಪ್ರಮೇಯ, ಉಪಗ್ರಹ ಸಂವಹನ ಮಾದರಿ, ಉಷ್ಣ ವಿದ್ಯುತ್ ಸ್ಥಾವರ, ದಸರಾ ಉತ್ಸವ, ಬೆಂಗಳೂರು ಮಾದರಿ, ಬೀಜಗಣಿತದ ಗುರುತುಗಳು, ಯಕ್ಷಗಾನ, ಜ್ಯೋತಿರ್ಲಿಂಗ, ಆರ್ಥಿಕ ವಲಯಗಳು, ರಕ್ಷಣಾ ಪಡೆ, ಮುಂತಾದ ಮಾದರಿಗಳು ಸಾರ್ವಜನಿಕರ ಗಮನ ಸೆಳೆದವು.
ಶ್ರೀರಂಗಪಟ್ಟಣ ವಿದ್ಯಾಭಾರತಿ ಸ್ಕೂಲಿನ ಸಂಚಾಲಕ ರಂಗನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಳ್ಳಳ್ಳಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಜೆ.ಸೋಮಶೇಖರ್, ಮುಖ್ಯಶಿಕ್ಷಕಿ ಶಿವಮಣಿ, ಸಂಯೋಜಕ ವಿಕಾಸ್, ಶಿಕ್ಷಕಿಯರಾದ ಶ್ರುತಿ, ಕೋಮಲಾ, ಶಬ್ರಿನ್, ಶಿಕ್ಷಕಿಯರು ಪಾಲಕರು ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.