

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪ್ರಾಚೀನ ಕಾಲದ ನಾಣ್ಯಗಳು ನೋಡಲು ಸಿಗುವುದು ಅಪರೂಪ. ಅಂತಹ ನಾಣ್ಯಗಳ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಮಾಡಿದ್ದಾರೆ. ಹೆಗ್ಗಡೆಯವರ ಪುರಾತನ ವಸ್ತು ಸಂಗ್ರಹಗಳ ಜತೆಗೆ ಮೂಡಿಗೆರೆ ಎಂ.ಎಲ್.ಅಶೋಕ್ ಸಂಗ್ರಹಿಸಿದ ಪ್ರಾಚೀನ ಕಾಲದ ನಾಣ್ಯಗಳ ಪ್ರದರ್ಶನ ಆಯೋಜಿಸಿದ್ದು ಶಾಲಾ ಮಕ್ಕಳಿಗೆ, ಆಸಕ್ತರಿಗೆ ನಾಣ್ಯಗಳ ಮೂಲಕ ಇತಿಹಾಸ ತಿಳಿದುಕೊಳ್ಳಲು ಇರುವ ಅವಕಾಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ಹೇಳಿದರು.
ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಫೆ.17ರಿಂದ ಮಾ.1ರವರೆಗೆ ನಡೆಯಲಿರುವ ಪ್ರಾಚೀನ ಕಾಲದ ನಾಣ್ಯ, ಅಂಚೆ ಚೀಟಿಗಳ ವಿಶೇಷ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನಾಣ್ಯಗಳ ಸಂಗ್ರಹಕಾರ ಮೂಡಿಗೆರೆ ಎಂ.ಎಲ್.ಅಶೋಕ್ ಮಾತನಾಡಿ, ನನ್ನ ಪ್ರಾಚೀನ ವಸ್ತುಗಳ ಸಂಗ್ರಹಕ್ಕೆ ಡಿ.ವೀರೇಂದ್ರ ಹೆಗ್ಗಡೆಯವರು, ಅವರ ಮಂಜೂಷಾ ವಸ್ತು ಸಂಗ್ರಹಾಲಯವೇ ಪ್ರೇರಣೆ. ಪ್ರಾಚೀನ ಭಾರತದಿಂದ ಆರಂಭಗೊಂಡು ಮೊನ್ನೆಯಷ್ಟೇ ಬಿಡುಗಡೆಗೊಂಡ ನಾಣ್ಯಗಳ ವರೆಗೆ ಸಂಗ್ರಹಿಸಲಾದ 1000ಕ್ಕೂ ಹೆಚ್ಚಿನ ನಾಣ್ಯ ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ರಾಜ-ಮಹಾರಾಜರ ಕಾಲ, ಸ್ವಾತಂತ್ರೃ ಪೂರ್ವ, ಸ್ವತಂತ್ರ ಭಾರತದ ಕಾಲದಿಂದ ಹಿಡಿದು ವಿಶೇಷ ಸಂದರ್ಭಗಳಲ್ಲಿ ಸರ್ಕಾರ ಬಿಡುಗಡೆಗೊಳಿಸಿದ ನಾಣ್ಯ, ಅಂಚೆ ಚೀಟಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ ಹೀಗೆ ಹಲವು ರೀತಿಯ ನಾಣ್ಯ ನೋಡಬಹುದು ಎಂದರು.
ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವೀರು ಶೆಟ್ಟಿ ಹೇ ಮಾತನಾಡಿ, ಧರ್ಮಸ್ಥಳದಲ್ಲಿರುವ ಮಂಜೂಷಾ ಮ್ಯೂಸಿಯಂನಲ್ಲಿ ವೀರೇಂದ್ರ ಹೆಗ್ಗಡೆಯವರ ಸಂಗ್ರಹಗಳ ಪ್ರದರ್ಶನದ ಜತೆಗೆ ವಿವಿಧ ಚಟುವಟಿಕೆ, ಕಾರ್ಯಾಗಾರಗಳ ಮೂಲಕ ಶಾಲಾ ಮಕ್ಕಳಿಗೆ, ಆಸಕ್ತರಿಗೆ ಪುರಾತನ ವಸ್ತುಗಳ ಮಾಹಿತಿ ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಸ್ತು ಸಂಗ್ರಹಾಲಯ ಜ್ಞಾನ ಹೆಚ್ಚಿಸುವುದರ ಜತೆಗೆ ಇನ್ನಷ್ಟು ಆಸಕ್ತಿ ಹೆಚ್ಚಲು ಪ್ರೇರಣೆಯಾಗಿವೆ ಎಂದರು.
ಮಂಜೂಷಾ ವಸ್ತು ಸಂಗ್ರಹಾಲಯ ಉಪ ನಿರ್ದೇಶಕ ರಿತೇಶ್ ಶರ್ಮಾ ಎಸ್‌ಡಿಎಂ ಸಂಸ್ಕೃತಿ, ಸಂಶೋಧನಾ ಪ್ರತಿಷ್ಠಾನದ ಡಾ.ಪವನ್ ಕುಮಾರ್, ಇತರ ಸಿಬ್ಬಂದಿ ಉಪಸ್ಥಿತರಿದ್ದರು.