

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ
ಬಯಲು ಬಹಿರ್ದೆಸೆಮುಕ್ತ ಪ್ರದೇಶ ನಿರ್ಮಾಣ ಮತ್ತು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೆ ನಿರಂತರ ಕಸರತ್ತು ನಡೆಯುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಗುರಿ ಸಾಧನೆಗೆ ಮತ್ತಷ್ಟು ಸುಧಾರಣೆ ಅವಶ್ಯವಾಗಿದೆ.
ಪ್ರಸ್ತುತ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 1394 ವೈಯಕ್ತಿಕ ಶೌಚಗೃಹ ನಿರ್ಮಾಣ ಗುರಿ ಪೈಕಿ 781, ಸಮುದಾಯ ಶೌಚಗೃಹ ನಿರ್ಮಾಣದಲ್ಲಿ 29 ಗುರಿ ಪೈಕಿ 27 ಶೌಚಗೃಹಗಳು ನಿರ್ಮಾಣಗೊಂಡಿವೆ. ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳ ಪೈಕಿ 146 ಪಂಚಾಯಿತಿಗಳಲ್ಲಿ 1ಘನತಾಜ್ಯ ನಿರ್ವಹಣೆ, 2647 ಗ್ರಾಮಗಳ ಪೈಕಿ 387 ಗ್ರಾಮಗಳಲ್ಲಿ ದ್ರವತ್ಯಾಜ್ಯ ನಿರ್ವಹಣೆಯಾಗುತ್ತಿದೆ.
ಅವೈಜ್ಞಾನಿಕ ವಿಲೇವಾರಿ
ಪ್ರಸ್ತುತ ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಒಣ ಮತ್ತು ಹಸಿ ಕಸವನ್ನು ಸಂಗ್ರಹಿಸುತ್ತಿವೆ. ನಿರ್ವಹಣಾ ಘಟಕಗಳಲ್ಲಿ ಲೋಡ್‌ಗಟ್ಟಲೇ ದಾಸ್ತಾನು ಮಾಡುತ್ತಿವೆ. ಆದರೆ, ಬಹುತೇಕ ಕಡೆ ವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿಲ್ಲ. ರಾಶಿ ರಾಶಿ ಕಸದಿಂದ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿರುವ ಜತೆಗೆ ದುರ್ವಾಸನೆ ಹರಡುವ ತಾಣಗಳಾಗಿವೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಕೆಲವೆಡೆ ಮಾತ್ರ ಆಧುನಿಕ ಯಂತ್ರೋಪಕರಣಗಳ ಮೂಲಕ ಸಂಸ್ಕರಣೆ, ಗೊಬ್ಬರ ತಯಾರಿಕೆ ಪ್ರಕ್ರಿಯೆ ನಡೆಯುತ್ತಿದೆ. ಮತ್ತೊಂದೆಡೆ ಕಸಕ್ಕೆ ಬೆಂಕಿಹಚ್ಚಿ ಕೈತೊಳೆದುಕೊಳ್ಳುವ ಕೆಲಸವಾಗುತ್ತಿದೆ.
ಬಯಲು ಬಹಿರ್ದೆಸೆಗೆ ಕಡಿವಾಣ
ಸ್ವಚ್ಛ ಭಾರತ್ ಅಭಿಯಾನದಡಿ ಲಾನುಭವಿಗಳಿಗೆ ಸರ್ಕಾರದ ಅನುದಾನದಲ್ಲಿ ಶೌಚಗೃಹ ನಿರ್ಮಿಸಿಕೊಡಲಾಗುತ್ತಿದೆ. ಹೆಚ್ಚಿನ ಜಾಗದ ಕೊರತೆ ಇರುವ ಮನೆಗಳಿರುವ ಕಡೆ ಸಮುದಾಯ ಶೌಚಗೃಹ ಕಟ್ಟಿಸಿಕೊಡಲಾಗುತ್ತಿದೆ. ಹಾಗೆಯೇ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವುದರಿಂದ ಬಹುತೇಕ ಬಯಲು ಬಹಿರ್ದೆಸೆಗೆ ಕಡಿವಾಣ ಬಿದ್ದಿದೆ.
ಸಮರ್ಪಕ ನಿರ್ವಹಣೆ ಅಗತ್ಯ
ಜಿಲ್ಲೆಯನ್ನು ಈಗಾಗಲೇ ಪ್ಲಾಸ್ಟಿಕ್‌ಮುಕ್ತ ಪ್ರದೇಶವನ್ನಾಗಿ ೋಷಿಸಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆದರೆ ದಂಡ ವಿಧಿಸಲಾಗುತ್ತಿದೆ. ಆದರೆ, ಇದರ ನಡುವೆಯೂ ಅವೈಜ್ಞಾನಿಕ ವ್ಯವಸ್ಥೆಯು ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಸ್ಥಳೀಯ ಜನರ ಅಸಹಕಾರ, ಇಲಾಖೆ ಅಧಿಕಾರಿಗಳ ಅಸಡ್ಡೆ ಕಂಡುಬರುತ್ತಿದ್ದು ಇದು ಪರಿಪೂರ್ಣ ನೈರ್ಮಲ್ಯ ವಾತಾವರಣ ನಿರ್ಮಾಣಕ್ಕೆ ತೊಡಕಾಗಿದೆ.
ಸಮುದಾಯ ಶೌಚಗೃಹ
ಕಳೆದ 2023-24ನೇ ಸಾಲಿನಿಂದ ಇಲ್ಲಿಯವರೆಗೂ 29 ಸಮುದಾಯ ಶೌಚಗೃಹಗಳ ನಿರ್ಮಾಣಕ್ಕೆ ತಯಾರಿಸಿದ ಡಿಪಿಆರ್ ವರದಿಗೆ ಅನುಮೋದನೆ ಸಿಕ್ಕಿದ್ದು, 27 ಪೂರ್ಣಗೊಂಡಿವೆ. 2 ನಿರ್ಮಾಣದ ಹಂತದಲ್ಲಿವೆ.
ತ್ಯಾಜ್ಯ ನಿರ್ವಹಣೆಗೆ 48 ಘಟಕ
ಜಿಲ್ಲೆಯಲ್ಲಿನ 157 ಗ್ರಾಪಂಗಳ ವ್ಯಾಪ್ತಿಗೆ 53 ಘಟಕಗಳ ನಿರ್ಮಾಣದ ಗುರಿ ಹೊಂದಲಾಗಿತ್ತು. ಇದರಲ್ಲಿ 146 ಗ್ರಾಪಂಗಳ ವ್ಯಾಪ್ತಿಗೆ 48 ಘಟಕಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ ಇವು ಕೆಲಸ ನಿರ್ವಹಿಸುತ್ತಿವೆ. 5 ಗ್ರಾಪಂಗಳ 2 ಘಟಕಗಳಿಗೆ ಜಾಗದ ಸಮಸ್ಯೆ ಇದ್ದು, 6 ಗ್ರಾಪಂಗಳ 3 ಘಟಕಗಳ ಅಡಿಪಾಯ ನಿರ್ಮಾಣದ ಹಂತದಲ್ಲಿವೆ. ಇನ್ನು ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ 8 ಗ್ರಾಪಂಗಳಿಗೆ ಸ್ಥಳೀಯ ನಗರಸಭೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಸುಧಾರಣಾ ಕ್ರಮಗಳ ನಿರೀಕ್ಷೆ
ಶೌಚಗೃಹ ನಿರ್ಮಾಣ ಪ್ರಗತಿ ವಿವರ (ಆವರಣದಲ್ಲಿರುವುದು ಗುರಿ)
ತಾಲೂಕು ವೈಯಕ್ತಿಕ ಸಮುದಾಯ ಶೌಚಗೃಹ
ಬಾಗೇಪಲ್ಲಿ 81(161) 10(10)
ಚಿಕ್ಕಬಳ್ಳಾಪುರ 233(361) 5(6)
ಚಿಂತಾಮಣಿ 91(180) 2(3)
ಗೌರಿಬಿದನೂರು 268(436) 9(9)
ಗುಡಿಬಂಡೆ 16(43) -
ಶಿಡ್ಲಘಟ್ಟ 92(213) 1(1)
ಒಟ್ಟು 781(1394) 27(29)
ತ್ಯಾಜ್ಯ ನಿರ್ವಹಣೆ ಘಟಕಗಳ ವಿವರ (ಆವರಣದಲ್ಲಿ ಗುರಿ)
ತಾಲೂಕು ಘನತಾಜ್ಯ (ಗ್ರಾಪಂ) ದ್ರವ ತ್ಯಾಜ್ಯ (ಗ್ರಾಪಂ)
ಬಾಗೇಪಲ್ಲಿ 23(25) 71(657)
ಚಿಕ್ಕಬಳ್ಳಾಪುರ 19(23) 82(239)
ಚಿಂತಾಮಣಿ 31(35) 94(812)
ಗೌರಿಬಿದನೂರು 37(38) 41(615)
ಗುಡಿಬಂಡೆ 8(8) 27(86)
ಶಿಡ್ಲಘಟ್ಟ 28(28) 72(248)
ಒಟ್ಟು 146(157) 386(2647)