ಎಫ್​ಐಆರ್​ನಲ್ಲಿ ಕಥೆ ಕಟ್ಟಿದ ಪೊಲೀಸರು: ಪೊಲೀಸರನ್ನೇ ಅವಾಕ್ಕಾಗಿಸಿದ ಆರೋಪಿ!

bala
balasing
Published on

ಧಾರವಾಡ: ಅಬಕಾರಿ ಪೊಲೀಸ್ ಅಕ್ರಮ ಸಾರಾಯಿ ಸಂಗ್ರಹಿಸುವವರ ಮೇಲೆ ದಾಳಿ ಮಾಡುವುದು ಸಹಜ. ಈ ವೇಳೆ ಎಫ್​ಐಆರ್​ ದಾಖಲಿಸಿ ಆರೋಪಿತರನ್ನು ಬಂಧಿಸುತ್ತಾರೆ. ಘಟನೆ ಏನು ನಡಿದಿದೆಯೋ ಅದನ್ನೇ ಹೇಳುವುದು ಎಫ್​ಐಆರ್​. ಆದರೆ, ಧಾರವಾಡ ಜಿಲ್ಲೆಯ ಕಲಘಟಗಿ ಅಬಕಾರಿ ಪೊಲೀಸ್ ಬಹಳ ಚಾಣಾಕ್ಷ. ಇದೀಗ ಅವರ ಚಾಣಾಕ್ಷತನವೇ ಅವರಿಗೆ ಮುಳುವಾಗಿ ಮೇಲಾಧಿಕಾರಿಗಳ ಎದುರು ಮುಜುಗರ ಅನುಭವಿಸುವಂತಾಗಿದೆ.

ಹೌದು, ಫೆಬ್ರವರಿ 6 ರಂದು ಕಲಘಟಗಿ ಪಟ್ಟಣದ ಬಾಲಾಸಿಂಗ್ ಎನ್ನುವ ಸೆಕ್ಯೂರಿಟಿ ಗಾರ್ಡ್​ ಮನೆ ಮೇಲೆ ಕಲಘಟಗಿ ಅಬಕಾರಿ ನಿರೀಕ್ಷಕ ಅಮಿತ ಬೆಳ್ಳುಬ್ಬಿ ನೇತೃತ್ವದಲ್ಲಿ ದಾಳಿ ನಡೆದಿತ್ತು. ಈ ವೇಳೆ ಬಾಲಾಸಿಂಗ್ ಮನೆಯಲ್ಲಿ ಅಕ್ರಮ ಮಧ್ಯ ಸಿಕ್ಕಿದೆ ಎಂದು ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಸುಮ್ಮನೇ ಎಫ್​ಐಆರ್​ ದಾಖಲಿಸಿದ್ದರೆ ಈ ವಿಷಯ ಪ್ರಸ್ತಾಪವೇ ಆಗುತ್ತಿರಲಿಲ್ಲ. ಆದರೆ, ಅಬಕಾರಿ ಪೊಲೀಸರು, ಎಫ್​ಐಆರ್​ನಲ್ಲಿ ತಾವು ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕಷ್ಟಪಟ್ಟು ಹಿಡಿದಿದ್ದೇವೆ ಎಂದು ಬರೆದುಕೊಂಡಿದ್ದರು. ಅಲ್ಲದೇ ಮೇಲಾಧಿಕಾರಿಗಳಿಂದ ಶಹಬ್ಬಾಸ್​ಗಿರಿಯನ್ನು ಪಡೆದಿದ್ದರು.

ಎಫ್​ಐಆರ್ ಕಾಫಿ ನೋಡಿದ ಬಾಲಾಸಿಂಗ್ ಗೆ ತಲೆ ಕೆಟ್ಟು ಹೋಗಿದೆ. ಏಕೆಂದರೆ ಅಸಲಿಗೆ ಪೊಲೀಸರು ತನ್ನನ್ನು ಚೇಸ್ ಮಾಡಿಲ್ಲ, ನಾನೆಲ್ಲೂ ಓಡಿ ಹೋಗಿಲ್ಲ ಎಂದು. ಆದರೆ ಪೊಲೀಸರಿಗೆ ಏನು ಹೇಳುವುದು ಎಂದು ವಿಚಾರ ಮಾಡಿ, ಮನೆ ಹತ್ತಿರದ ಸಿಸಿಟಿವಿ ಮೊರೆ ಹೋಗಿದ್ದಾನೆ. ಸಿಸಿಟಿವಿಯಲ್ಲಿ ಫೆ 6 ರಂದು ಅಬಕಾರಿ ಪೊಲೀಸರು ಬಾಲಾಸಿಂಗ್ ಮೆನೆ ಒಳಗೆ ಹೋಗಿ ಸಹಜವಾಗಿ ಒಂದು ಬ್ಯಾಗ್ ಸಮೇತ ಹೊರ ಬಂದಿದ್ದಾರೆ. ಪೊಲೀಸರು ಎಫ್​ಐಆರ್​ನಲ್ಲಿ ದಾಖಲಿಸಿದ ಸಂಗತಿಗಳು ನಡದೇ ಇಲ್ಲ ಎಂದು ಬಾಲಾಸಿಂಗ್ ಆರೋಪಿಸಿದ್ದಾನೆ.

ಅಲ್ಲದೇ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೂ ತರುವುದಾಗಿ ಆರೋಪಿ ಬಾಲಾಸಿಂಗ್ ಹೇಳಿದ್ದಾನೆ. ಈಗಿನ ಕಾಲದಲ್ಲೂ ಪೊಲೀಸರು ಆಟ ಆಡಲು ಹೋದರೆ ತಾವೇ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. (ದಿಗ್ವಿಜಯ ನ್ಯೂಸ್, ಧಾರವಾಡ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net