ಕೌನ್ಸೆಲಿಂಗ್ ಮೂಲಕ ಅಬಕಾರಿ ನೌಕರರ ವರ್ಗಾ: 1.41 ಕೋಟಿ ರೂ.ವೆಚ್ಚದಲ್ಲಿ ತಂತ್ರಾಂಶ ಅಭಿವೃದ್ಧಿ

excise dept
Published on

ಬೆಂಗಳೂರು:ಗ್ರೂಪ್ ‘ಸಿ’ ವೃಂದದ ಅಧಿಕಾರಿಗಳು,ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಸಲುವಾಗಿ ಆನ್‌ಲೈನ್ ತಂತ್ರಾಂಶ ಅಭಿವೃದ್ಧಿಗೆ ಅಬಕಾರಿ ಇಲಾಖೆ ಮುಂದಾಗಿದೆ.

1.41 ಕೋಟಿ ರೂ. ವೆಚ್ಚದಲ್ಲಿ ತಂತ್ರಾಂಶ ಅಭಿವೃದ್ಧಿಗೆ ಖಾಸಗಿ ಕಂಪನಿಗೆ 4ಜಿ ಅಡಿಯಲ್ಲಿ ವಹಿಸಲಾಗಿದೆ. ಇದಕ್ಕಾಗಿ ರಾಜ್ಯ ಪಾನೀಯ ನಿಗಮಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಇಲಾಖೆಯಲ್ಲಿ ಗ್ರೂಪ್ ‘ಸಿ’ ವೃಂದದ 151 ಅಬಕಾರಿ ನಿರೀಕ್ಷಕರು, 114 ಉಪ ನಿರೀಕ್ಷಕರು, 7 ಮುಖ್ಯ ಪೇದೆ ಮತ್ತು 415 ಪೇದೆ ಸೇರಿ ಒಟ್ಟು 687 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿತ್ತು. ಇನ್ನುಮುಂದೆ ಡಿಜಿಟಲ್ ವಿಧಾನದಲ್ಲಿ ಅಭಿವೃದ್ಧಿಪಡಿಸಲು, ಇಲಾಖೆ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯ ಗ್ರೂಪ್ ‘ಸಿ’ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದನ್ನು ಘೋಷಿಸಲಾಗಿತ್ತು. ಅದರಂತೆ, ಈ ವೃಂದದ ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ, ನಿಯೋಜನೆ ವ್ಯವಸ್ಥೆಯನ್ನು ಇಲಾಖೆಯಲ್ಲಿ ಪರಿಚಯಿಸಲಾಯಿತು. ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಅಧಿಕಾರಿಗೆ ವರ್ಗಾವಣೆ) ನಿಯಮ ಜಾರಿಗೆ ತರಲಾಗಿತ್ತು. ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಗ್ರೂಪ್ ‘ಸಿ’ ವೃಂದದ ನೌಕರರನ್ನು ಸೇವಾವಧಿ ಹಿರಿತನ ಆಧಾರ ಮೇರೆಗೆ ಡಿಜಿಟಲ್ ವಿಧಾನದಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿತ್ತು.

ಇಲಾಖೆಯಲ್ಲಿ ಅಬಕಾರಿ ಹೆಚ್ಚುವರಿ ಆಯುಕ್ತ, ಜಂಟಿ ಆಯುಕ್ತ, ಉಪ ಆಯುಕ್ತ, ಅಧೀಕ್ಷಕ, ಉಪ ಆಧೀಕ್ಷಕ, ಅಬಕಾರಿ ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯ ಪೇದೆ ಸೇರಿ ಒಟ್ಟು 5,825 ಹುದ್ದೆಗಳ ಪೈಕಿ 3,456 ಹುದ್ದೆಗಳು ಭರ್ತಿಯಾದರೆ, ಉಳಿದ ಹುದ್ದೆಗಳು ಖಾಲಿ ಇವೆ. ಗ್ರೂಪ್ ‘ಎ’ ಹುದ್ದೆಗಳು 150 ಇದ್ದರೆ, ‘ಗ್ರೂಪ್ ‘ಬಿ’ ಹುದ್ದೆಗಳು 130 ಹುದ್ದೆಗಳಿವೆ. ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆ ಸೇರಿ ಒಟ್ಟು 5,548 ಹುದ್ದೆಗಳ ಪೈಕಿ 3,229 ಹುದ್ದೆಗಳು ಭರ್ತಿಯಾಗಿವೆ. ವರ್ಗಾವಣೆಗೆ ಅಬಕಾರಿ ಉಪ ಆಯುಕ್ತರ ಹುದ್ದೆ, ಉಪ ಅಧೀಕ್ಷಕ, ಅಬಕಾರಿ ನಿರೀಕ್ಷಕ, ಉಪ ನಿರೀಕ್ಷಕ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಗ್ರೂಪ್ ‘ಸಿ’ ವೃಂದದ ನೌಕರರನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಧ ಹುದ್ದೆಗಳ ವರ್ಗಾವಣೆ ದಂಧೆಗೆ ಬ್ರೇಕ್ ಬಿದ್ದಿದೆ. ಆದರೆ, ಗ್ರೂಪ್ ‘ಎ’ ಉಪ ಆಯುಕ್ತ, ಗ್ರೂಪ್ ‘ಬಿ’ ವೃಂದದ ಅಧೀಕ್ಷಕ, ಉಪ ಅಧೀಕ್ಷಕ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾಯಿಸುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net