ತಲ್ಲೂರು ಗ್ರಾ.ಪಂ. ವಿರುದ್ಧ ರೈತರ ಧರಣಿ

26gan6
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ತಲ್ಲೂರು ಗ್ರಾಮ ಪಂಚಾಯಿತಿ ಮೂರನೇ ವಾರ್ಡಿನ ಸಬ್ಲಾಡಿ ಕಳಿನಬಾಗಿಲು ಪ್ರದೇಶದಲ್ಲಿ ವಾರಾಹಿ ಚೆಕ್ ಡ್ಯಾಮ್‌ನಲ್ಲಿರುವ ಹೆಚ್ಚುವರಿ ನೀರಿನಿಂದ 200 ಎಕರೆ ಗದ್ದೆಗಳು, ಸ್ಥಳೀಯ ಮನೆಗಳಿಗೆ ತೊಂದರೆಯಾಗುತ್ತಿದೆ. ಇದನ್ನು ನಿರ್ಲಕ್ಷಿಸಿದ ಗ್ರಾ.ಪಂ ವಿರುದ್ಧ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ರೈತರು ಸೋಮವಾರ ಧರಣಿ ಕುಳಿತರು.

ಸೌಕೂರು ಏತ ನೀರಾವರಿಯಿಂದ ಕಳಿನಬಾಗಿಲಿನ ಕೃಷಿ ಭೂಮಿಗೆ ನೀರು ಬಿಡಲಾಗುತ್ತಿದ್ದು, ಅಧಿಕ ಪ್ರಮಾಣದ ನೀರಿನ ಹರಿವಿನಿಂದ ಗದ್ದೆಗಳಲ್ಲಿ ನೀರು ತುಂಬಿದೆ. ಪ್ರಸ್ತುತ ಹಿಂಗಾರು ಬೆಳೆಯೇ ಸಂಪೂರ್ಣ ನಾಶವಾಗಿದ್ದು, ಅಪಾರ ನಷ್ಟ ಉಂಟಾಗಿದೆ ಎಂದು ಧರಣಿ ನಿರತ ರೈತರು ಆಕ್ರೋಶ ಹೊರಹಾಕಿದರು.

ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ಮಾತನಾಡಿ, ಬೇಸಿಗೆಯಲ್ಲೇ ಗದ್ದೆಗಳಲ್ಲಿ ನೀರು ತುಂಬಿದ್ದು, ಭತ್ತ ಕೃಷಿಗೆ ತೊಂದರೆಯಾಗಿದೆ. ಈ ಬಾರಿ 50ರಿಂದ 60 ಎಕರೆ ಗದ್ದೆಯನ್ನು ಕಟಾವು ಮಾಡಲು ಅಸಾಧ್ಯವಾಗಿದೆ. ಕೃಷಿಯ ಜ್ಞಾನವಿಲ್ಲದವರನ್ನೇ ಕೃಷಿ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದ್ದು, ಅವರ ವೈಯಕ್ತಿಕ ಕಾರಣಗಳಿಂದಾಗಿ ಡ್ಯಾಂನ ಹಲಗೆ ತೆರೆಯಲಾಗುತ್ತಿಲ್ಲ. ರೈತರಿಗೆ ಆದ ನಷ್ಟಕ್ಕೆ ಸರ್ಕಾರ, ಸ್ಥಳೀಯ ಗ್ರಾಮ ಪಂಚಾಯಿತಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕೃಷಿಕ ರಾಘವೇಂದ್ರ ಸಬ್ಲಾಡಿ ಇದಕ್ಕೆ ಧ್ವನಿಗೂಡಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು, ಪಿಡಿಒ ನಾಗರತ್ನ್ನಾ, ರೈತ ಸಂತೋಷ್ ಶೆಟ್ಟಿ, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಧರಣಿ ನಿರತ ಸಬ್ಲಾಡಿ ರೈತರು ಉಪತಹಸೀಲ್ದಾರ್ ವಿನಯ್ ಮೂಲಕ ಕುಂದಾಪುರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಉಪತಹಸೀಲ್ದಾರ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net