ಕರಾವಳಿ ಹೊರತುಪಡಿಸಿ ಉಳಿದೆಡೆ ಮಳೆ ಇಳಿಕೆ

md rain
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಳೆಯಿಂದ ಜಲಾವೃತವಾಗಿರುವುದು.
Published on

ಬೆಂಗಳೂರು: ಆಂಧ್ರಪ್ರದೇಶ, ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುತ್ತಿದ್ದರೆ ಕರ್ನಾಟಕದಲ್ಲಿ ಕ್ಷೀಣವಾಗಿದೆ. ಶಿವಮೊಗ್ಗದ ಆಗುಂಬೆ,ಕೊಡಗಿನ ಗೋಣಕೊಪ್ಪ, ಕಲಬುರಗಿಯ ಆಳಂದ, ಯಾದಗಿರಿ,ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸೋಮವಾರ ವರ್ಷಧಾರೆಯಾಗಿದೆ. ಬೆಂಗಳೂರು ಸೇರಿದ ಕೆಲ ಜಿಲ್ಲೆಗಳ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಯಿತು.

ಉತ್ತರ ಕನ್ನಡ, ಬೀದರ್​, ಕಲಬುರಗಿ, ರಾಯಚೂರು,ವಿಜಯಪುರ ಮತ್ತು ಯಾದಗಿರಿಯಲ್ಲಿ ಸೆ.30ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸೆ.5ರಿಂದ ಮುಂದಿನ ಮೂರು ದಿನ ಯೆಲ್ಲೋ ಅರ್ಲಟ್​ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಮಳೆ ಕಡಿಮೆ ಇರಲಿದೆ.

ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಸದ್ಯ ಹವಾಮಾನ ಸ್ಥಿತಿ ಗಮನಿಸಿದರೆ ಕರಾವಳಿ ಹೊರತುಪಡಿಸಿ, ಮಲೆನಾಡು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸೆ.4 ರಿಂದ ಮಳೆ ಕ್ಷೀಣವಾಗಲಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ಪ್ರಕಾರ ಪ್ರಸಕ್ತ ತಿಂಗಳಲ್ಲಿ ದೇಶಾದ್ಯಂತ ವಾಡಿಕೆಗಿಂತ ತುಸು ಅಧಿಕ ಮಳೆಯಾಗಬಹುದು. ಕರ್ನಾಟಕದಲ್ಲೂ ವಾಡಿಕೆಯಷ್ಟೇ ಸುರಿಯಲಿದೆ.ಫೆಸಿಫಿಕ್​ ಸಾಗರದಲ್ಲಿ ಸಮುದ್ರದ ಮೇಲ್ಮೆ ತಾಪಮಾನವೂ ಸರಾಸರಿಗಿಂತ ತಂಪಾಗಿರುತ್ತದೆ. ಮಾನ್ಸೂನ್​ ಋತುವಿನ ಅಂತ್ಯದಲ್ಲಿ "ಲಾ ನಿನಾ' ಇನ್ನಷ್ಟು ಸಕ್ರಿಯವಾಗಲಿದ್ದು, ಹೆಚ್ಚು ಮಳೆ ತರಲಿದೆ. ಅ.1ರಿಂದ ಡಿ.31ರವರೆಗೆ ಈಶಾನ್ಯ ಮಾನ್ಸೂನ್​ನಲ್ಲಿ ವಾಡಿಕೆಯಷ್ಟೇ ಮಳೆಯಾಗಲಿದೆ ಎಂದು ಶ್ರೀನಿವಾಸರೆಡ್ಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net