

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಮಳೆ ಬಂದಾಗ ಎಲ್ಲೆಂದರಲ್ಲಿ ಕೆಸರು, ಜತೆಗೆ ಗುಂಡಿಯಲ್ಲಿ ತುಂಬಿದ ಮಳೆನೀರು, ಬಿಸಿಲು ಇದ್ದಾಗ ವಿಪರೀತ ಧೂಳು. ರಸ್ತೆಯಲ್ಲಿ ಓಡಾಡಲು ಹಿಂದೆ ಮುಂದೆ ನೋಡುವ ನಾಗರಿಕರು. ರಸ್ತೆಯ ಅಕ್ಕಪಕ್ಕದ ಮನೆಗಳು ಮತ್ತು ವ್ಯಾಪಾರ ಕೇಂದ್ರಗಳಿಗೆ ಎದುರಾಗಿರುವ ಸಂಕಷ್ಟ.
ಇದು ನಗರದ ಎಂ.ಜಿ.ರಸ್ತೆ, ಛತ್ರದಬೀದಿ, ಮಂಡೀಪೇಟೆ, ಬಳೇಪೇಟೆ ಸೇರಿ ಬಹುತೇಕ ವಾಣಿಜ್ಯ ಕೇಂದ್ರಗಳ ಬೀದಿ ಬೀದಿಗಳು ಗುಂಡಿಮಯವಾಗಿದ್ದು, ಓಡಾಟ ಕಷ್ಟಕರವಾಗಿದೆ. ಕಳೆದ ಏಳೆಂಟು ತಿಂಗಳಿಂದ ರಾಮನಗರ ಜಲಮಂಡಳಿಯು ಪ್ರತಿ ವಾರ್ಡಿನಲ್ಲಿ 24*7 ಕುಡಿಯುವ ನೀರಿನ ಯೋಜನೆ ಕಾಮಗಾರಿ, ನಗರಸಭೆಯಿಂದ ನಗರೋತ್ಥಾನಡಿ ನಗರದ ಪ್ರತಿ ವಾರ್ಡ್‌ನಲ್ಲೂ ಚರಂಡಿ, ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ, ಚರಂಡಿ ಕಾಮಗಾರಿ ಸೇರಿ ಇತರೆ ಕಾಮಗಾರಿಗಾಗಿ ನಡೆದಿವೆ. ಕುಡಿಯುವ ನೀರಿನ ಸಲುವಾಗಿ ಮನೆ ಮನೆಗೆ ನಲ್ಲಿ ಇತರೆ ಕಾಮಗಾರಿಗೆ ಅಗೆದಿದ್ದ ರಸ್ತೆಯನ್ನು ಈಗಲೂ ಸರಿಪಡಿಸದೆ ಬಿಟ್ಟಿರುವುದರಿಂದ ಹೆಜ್ಜೆ ಹೆಜ್ಜೆಗೂ ಗುಂಡಿಗಳು ರೂಪುಗೊಂಡಿವೆ. ಕಾಮಗಾರಿ ಮುಗಿದರೂ ರಸ್ತೆ ಸರಿಪಡಿಸದೆ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದ ಜನ ಹೈರಾಣಾಗಿದ್ದಾರೆ.
ಈ ಕುರಿತು ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಕರಗದ ವೇಳೆ ನಗರಸಭೆ ವಿರುದ್ಧ ಒಂದಷ್ಟು ಆಕ್ರೋಶ ಹೊರಹಾಕಿದ್ದರು. ಆಗ ಗುಂಡಿಗಳಿಗೆ ತಾತ್ಕಾಲಿಕವಾಗಿ ಮಣ್ಣು ಮುಚ್ಚಿ ಹೋಗಿದ್ದರು. ಮತ್ತೊಮ್ಮೆ ನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ಹಿನ್ನೆಲೆಯಲ್ಲಿ ಆಗ ತಾತ್ಕಾಲಿಕವಾಗಿ ಕಲ್ಲಿನ ಪುಡಿ, ಮಣ್ಣು ಹಾಕಿ ಮುಚ್ಚಿದ್ದರು. ಚೆನ್ನಾಗಿದ್ದ ರಸ್ತೆಯನ್ನು ಪ್ರಗತಿ ಹೆಸರಿನಲ್ಲಿ ಇನ್ನಿಲ್ಲದಂತೆ ಮಾಡಿ, ಈಗ ತಾತ್ಕಾಲಿಕವಾಗಿ ಮಾಡುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಹಾರಿಕೆ ಉತ್ತರ
ವಾಹನಗಳ ಓಡಾಟ, ಮಳೆ ಹಿನ್ನೆಲೆಯಲ್ಲಿ ಮಣ್ಣು, ಕಲ್ಲಿನ ಧೂಳು ಮೇಲೇಳುತ್ತಾ ಒಂದೊಂದಾಗಿ ಗುಂಡಿಗಳು ಉಂಟಾಗಿ ರಸ್ತೆಯುದ್ದಕ್ಕೂ ಗುಂಡಿಮಯವಾಗಿ ರೂಪುಗೊಂಡಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹಿಂದೆ ಮುಂದೆ ನೋಡುವಂತಾಗಿದೆ. ರಸ್ತೆಗುಂಡಿ ಮುಚ್ಚಿ ಎಂದರೆ ಕಾಮಗಾರಿ ನಡೆಯುತ್ತಿದೆ. ಕೆಲಸ ಮುಗಿದ ಮೇಲೆ ಡಾಂಬರೀಕರಣ ನಡೆಸಲಾಗುತ್ತದೆ ಎಂಬ ಹಾರಿಕೆ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಗುಂಡಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಓಡಾಟ ಕಷ್ಟಕರವಾಗಿದೆ. ಸಾವು-ನೋವುಗಳಾದರೆ ಯಾವು ಹೊಣೆ ಎಂಬ ಪ್ರಶ್ನೆ ಮೂಡಿದೆ.
ಓಡಾಟ ತುಂಬಾ ಕಷ್ಟ
ಇನ್ನು ಇದೇ ರಸ್ತೆಗಳಲ್ಲಿ ಪ್ರಮುಖ ವಾಣಿಜ್ಯ ಚಟುವಟಿಕೆ, ಶಾಲೆ, ಆಸ್ಪತ್ರೆಗಳಿರುವ ಪ್ರದೇಶ ಆಗಿರುವುದರಿಂದ ಮಹಿಳೆಯರು ಹೆಚ್ಚಾಗಿ ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು, ವ್ಯಾಪಾರಕ್ಕೆ ಓಡಾಟ ನಡೆಸುತ್ತಾರೆ. ಆಸ್ಪತ್ರೆಗಳಿಗೆ ತೆರಳುವ ವಯಸ್ಸಾದವರು ರಸ್ತೆ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸರಿ ಇಲ್ಲದ ಕಾರಣ ಓಡಾಟ ನಡೆಸಲು ತುಂಬಾ ತೊಂದರೆ ಅನುಭವಿಸುವ ಸನ್ನಿವೇಶ ಸೃಷ್ಟಿಯಾಗಿದೆ.
ವ್ಯಾಪಾರಿಗಳಿಗೆ ಸಂಕಷ್ಟ
ತಾತ್ಕಾಲಿಕವಾದರೂ ರಸ್ತೆ ಮುಚ್ಚಲು ನಗರಸಭೆ ಮೀನಮೇಷ ಏಣಿಸುತ್ತಿದೆ. ಜತೆಗೆ ರಸ್ತೆ ಅಗೆತದಿಂದ ಡಾಂಬರು ಮಾಯವಾಗಿ ಮಣ್ಣಿನ ರಸ್ತೆಯಾಗಿರುವ ಕಾರಣ ಧೂಳು ಮೇಲೇಳುತ್ತಿದೆ. ಅಂಗಡಿ ವ್ಯಾಪಾರಸ್ಥರು ಅಂಗಡಿ ಬಾಗಿಲಿಗೆ ಪ್ಲಾಸ್ಟಿಕ್ ಮುಚ್ಚಿ ವ್ಯಾಪಾರ ನಡೆಸುವ ಪರಿಸ್ಥಿತಿ ಬಂದಿದೆ. ಧೂಳು ಮೇಲೇಳದಂತೆ ಜಲ ಮಂಡಳಿ ದಿನಕ್ಕೆ ಎರಡು ಭಾರಿ ನೀರು ಚುಮುಕಿಸಿ ಹೋಗುತ್ತಿದೆ. ಆದರೆ ಇದರಿಂದ ಗುಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ. ಕೂಡಲೇ ನಗರಸಭೆ ಗುಂಡಿಗಳಿಗೆ ಶಾಶ್ವತ ಮುಕ್ತಿ ಕಾಣಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಎಂ.ಜಿ.ರಸ್ತೆ, ಛತ್ರದಬೀದಿ, ಮಂಡೀಪೇಟೆ ಪ್ರಮುಖ ರಸ್ತೆಗಳಾಗಿದ್ದು, ಗುಂಡಿಗಳು ರಾರಾಜಿಸುತ್ತಿವೆ. ಇದು ಜಿಲ್ಲಾ ಕೆಂದ್ರವೇ ಎಂಬ ಜಿಜ್ಞಾಸೆ ಮೂಡುತ್ತಿದೆ. ಕರಗದ ವೇಳೆ ಮತ್ತು ಸಿಎಂ ರಾಮನಗರಕ್ಕೆ ಬಂದಾಗ ಮಣ್ಣು ಮುಚ್ಚಿ ಹೋದವರು ಇಲ್ಲಿಯವರೆಗೂ ಪತ್ತೆ ಇಲ್ಲ. ತಾತ್ಕಾಲಿಕವಾದರೂ ಗುಂಡಿ ಮುಚ್ಚುವ ಮನಸ್ಥಿತಿ ನಗರಸಭೆಗೆ, ಜಲಮಂಡಳಿಗೆ ಇದ್ದಂತಿಲ್ಲ. ಇದರಿಂದ ನಿತ್ಯ ಗುಂಡಿಬಿದ್ದ ರಸ್ತೆಯಲ್ಲೇ ಓಡಾಟ ನಡೆಸಿ ಧೂಳು ಕುಡಿಯುವ ಸ್ಥಿತಿ ಅನಿವಾರ್ಯವಾಗಿದೆ. ಇನ್ನಾದರೂ ಎಚ್ಚೆತ್ತು ಜನರಿಗೆ ವಿಷ ಉಣಿಸುವುದನ್ನ ಕಡಿಮೆ ಮಾಡಲಿ.
ಚಂದನ್‌ಮೋರೆ, ರಾಮನಗರ
ಜಲಮಂಡಳಿ ಕೆಲಸ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ಮುಗಿಯಲಿದೆ. ನಂತರ ನಗರದ ಎಲ್ಲ ರಸ್ತೆಗಳನ್ನು ಸರ್ಕಾರದ ಅನುದಾನ ಮತ್ತು ನಗರಸಭೆ ನಗರೋತ್ಥಾನದಡಿ ಡಾಂಬರೀಕರಣ ನಡೆಸಲಾಗುತ್ತದೆ. ತ್ವರಿತವಾಗಿ ಎಲ್ಲಿ ರಸ್ತೆ ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ನಗರಸಭೆ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಿದೆ.
ನಾಗೇಶ್, ಪೌರಾಯುಕ್ತ, ನಗರಸಭೆ
ಎಲ್ಲೆಲ್ಲಿ ಸಂಕಷ್ಟ?
* ಎಂ.ಜಿ.ರಸ್ತೆ
* ಛತ್ರದಬೀದಿ
* ಮಂಡೀಪೇಟೆ
* ಬಳೇಪೇಟೆ ಸೇರಿ ಬಹುತೇಕ ಕಡೆ