

ಶಿರಸಿ: ಅಡಕೆ ತೋಟಗಳಲ್ಲಿ ಬೆಳೆಯುತ್ತಿರುವ ಕಾಳುಮೆಣಸು ಬೆಳೆಗೆ ಮಳೆಗಾಲದಲ್ಲಿ ಬರುವ ಶೀಘ್ರ ಸೊರಗು ರೋಗದ ನಿಯಂತ್ರಣದ ಪರಿಹಾರೋಪಾಯಕ್ಕಾಗಿ ಸಂಶೋಧನೆ ಕೈಗೊಳ್ಳಲು ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರ ತಂಡ ಭೇಟಿ ನೀಡಿ, ಬಳ್ಳಿಯ ಬೇರು ಮತ್ತು ಮಣ್ಣಿನ ಮಾದರಿ ಸಂಗ್ರಹಿಸಿದ್ದಾರೆ.
ಸೊರಗು ರೋಗದ ನಡುವೆಯೂ ಹಲವು ರೈತರು ಉತ್ತಮ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಂಡು ರೋಗ ನಿಯಂತ್ರಣ ಮಾಡಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ವಿಚಿತ್ರವೆಂದರೆ ಈ ವರ್ಷ ರೋಗ ನಿಯಂತ್ರಣ ಕ್ರಮ ಕೈಗೊಂಡು ನವೆಂಬರ್ವರೆಗೂ ನಿಯಂತ್ರಣದಲ್ಲಿದ್ದ ಬಳ್ಳಿ ಸೊರಗುವ ರೋಗವು ನಂತರದ ತಿಂಗಳಿನಲ್ಲಿ ಮುಂದುವರೆದು ಮಾರ್ಚ್ನಲ್ಲಿ ಬಳ್ಳಿಗಳು ಶೀಘ್ರ ಬಾಡಿ ನಾಶವಾಗಿವೆ. ಇದು ಅನುಭವಿಕ ಕೃಷಿಕರಿಗೆ ಅಚ್ಚರಿ ಮೂಡಿಸಿತ್ತು. ಈ ಕುರಿತು ಫೆಬ್ರವರಿ ಕೊನೆಯಲ್ಲಿ ಇಲ್ಲಿನ ತೋಟಗಾರಿಕೆ ಇಲಾಖೆಯಲ್ಲಿ ಸ್ಥಳೀಯ ವಿಜ್ಞಾನಿಗಳು ಮತ್ತು ರೈತರ ಸಭೆ ನಡೆಸಿ ರ್ಚಚಿಸಲಾಗಿತ್ತು. ಆಗ ಸಮಸ್ಯೆ ಕುರಿತು ಚವತ್ತಿಯ ಎಂ.ಜಿ. ಭಟ್ಟ ಅವರು ಧಾರವಾಡ ಕೃ.ವಿ.ವಿ. ಉಪಕುಲಪತಿ ಡಾ. ಎಂ.ಬಿ. ಚಟ್ಟಿ ಅವರ ಗಮನಕ್ಕೆ ತಂದರು. ಕೂಡಲೇ ಸ್ಪಂದಿಸಿದ ಅವರು ತಜ್ಞರ ತಂಡ ಕಳುಹಿಸುವುದಾಗಿ ತಿಳಿಸಿದ್ದರು. ಅದರಂತೆ ವಿವಿ ಸಂಶೋಧನಾ ನಿರ್ದೇಶಕ ಡಾ. ಪಿ.ಎಲ್. ಪಾಟೀಲ ನೇತೃತ್ವದಲ್ಲಿ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಪಿ.ಎಸ್. ಹೂಗಾರ, ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಯಶೋದಾ ಹೆಗಡೆ, ತೋಟಗಾರಿಕೆ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ ಮತ್ತು ಡಾ. ರೂಪಾ ಪಾಟೀಲ, ಡಾ. ಸುಧೀಶ ಕುಲಕರ್ಣಿ ಮತ್ತು ಡಾ. ಅಬ್ದುಲ್ ಕರೀಮ್ ತಂಡದಲ್ಲಿದ್ದರು. ತಂಡ ಆರಂಭಿಕವಾಗಿ ಹೊಸ್ಮನೆಯ ಶ್ರೀಧರ ಭಟ್ಟ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ಶ್ರೀಧರ ಭಟ್ಟ ಹೊಸ್ಮನೆ ಮತ್ತು ಶಿರಸಿ ಹಾರ್ಟಿ ಕ್ಲಿನಿಕ್ನ ವಿಷಯ ತಜ್ಞ ವಿ.ಎಂ. ಹೆಗಡೆ, ರೋಗದ ಸಮಸ್ಯೆ ಮತ್ತು ರೈತರು ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು. ಶಿರಸಿ ಟಿಎಂಎಸ್ನ ಕಿಶೋರ ಹೆಗಡೆ, ಜಿ.ಆರ್. ಹೆಗಡೆ ಬೆಳ್ಳೇಕೇರಿ, ಎಂ.ಜಿ. ಭಟ್ಟ ಚವತ್ತಿ ಇದ್ದರು.
ಬದಲಾದ ವಾತಾವರಣ ಮತ್ತು ಮಣ್ಣನಲ್ಲಿನ ಬದಲಾವಣೆಯಿಂದ ಬೇರೆ ಬೇರೆ ರೋಗಾಣುಗಳ ಅಭಿವೃದ್ಧಿಗೆ ಕಾರಣವಾಗಬಹುದು. ಆದ್ದರಿಂದ ಪ್ರಯೋಗಾಲಯದಲ್ಲಿ ಮಣ್ಣು ಮತ್ತು ಬೇರಿನಲ್ಲಿ ಇರಬಹುದಾದ ರೋಗಾಣು ಮತ್ತು ವಿಷಕಾರಿ ಅಂಶಗಳನ್ನು ಪರೀಕ್ಷಿಸಿ, ಪರಿಹಾರ ಸೂಚಿಸಲಾಗುವುದು.| ಡಾ. ಪಿ.ಎಲ್. ಪಾಟೀಲ, ಕೃಷಿ ವಿವಿ ಸಂಶೋಧನಾ ನಿರ್ದೇಶಕ