

ಗಂಗಾವತಿ; ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದ್ದು, ಮುಂದೂಡಿಕೆಗೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಹಸೀಲ್ದಾರ್ ಯು.ನಾಗರಾಜ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸೆ.17ರಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಮೋಚನೆ ಸಿಕ್ಕಿದ್ದು, 2013ರಿಂದ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುತ್ತಿದೆ. ಆದರೆ, ಸೆ.12ರಿಂದ 19ರವರಿಗೆ ಶಾಲಾ ಮಕ್ಕಳಿಗೆ ಈ ಬಾರಿ ಅರ್ಧವಾರ್ಷಿಕ ಪರೀಕ್ಷೆ ಇದ್ದು, ಸೆ.17ರಂದು ವಿಜ್ಞಾನ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಹಿನ್ನೆಲೆಯಲ್ಲಿ ಮಕ್ಕಳು ಧ್ವಜಾರೋಹಣ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮದಕ್ಕೆ ಬರುವುದು ಅನುಮಾನ. ಆದ್ದರಿಂದ ಈ ಕುರಿತು ಪರಿಶೀಲಿಸುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು.
ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಇತರೆ ಕಾರ್ಯಕ್ರಮಗಳನ್ನು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಆನಂದ ನಾಗಮ್ಮನವರ್ ಮಾತನಾಡಿ, ಪರೀಕ್ಷೆ ರಾಜ್ಯಮಟ್ಟದ ಅಧಿಸೂಚನೆಯಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪರೀಕ್ಷೆ ಮುಂದೂಡಿಕೆ ಸುತ್ತೂಲೆ ಬರಬಹುದು. ಪರೀಕ್ಷೆ ತಯಾರಿ ಹಿನ್ನೆಲೆಯಲ್ಲಿ ಈ ಬಾರಿ ಮಕ್ಕಳು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದರು.
ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ, ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ, ವ್ಯವಸ್ಥಾಪಕ ಷಣ್ಮುಖಪ್ಪ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಸಿಡಿಪಿಒ ಜಯಶ್ರೀ ರಾಜಪುರೋಹಿತ್, ಪಿಡಬ್ಲುೃಡಿ ಎಇಇ ವಿಶ್ವನಾಥ, ಜೆಸ್ಕಾಂ ಎಇಇ ಮಂಜುನಾಥ, ಶಿರಸ್ತೇದಾರ ರವಿಕುಮಾರ ನಾಯಕ್ವಾಡಿ ಇತರರಿದ್ದರು.