

ಚನ್ನಪಟ್ಟಣ : ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಮಾಡಿರುವ ನೀರಾವರಿ ಯೋಜನೆಯನ್ನು ಕ್ಷೇತ್ರದ ಮತದಾರರು ಮರೆಯಬಾರದು. ನಾವು ಒಂದೇ ಜಿಲ್ಲೆಯವರು, ಅಭಿವೃದ್ಧಿ ವಿಚಾರವಾಗಿ ಒಂದಾಗಿದ್ದೇವೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ತಾಲೂಕಿನ ಕೋಡಂಬಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಜತೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂದು ಕನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಯೋಗೇಶ್ವರ್ ಮತ್ತೆ ಕಾಂಗ್ರೆಸ್‌ಗೆ ಬಂದಿದ್ದಾರೆ. ಈ ಚುನಾವಣೆಯಲ್ಲಿ ಬಾರಿ ಬಹುಮತದಿಂದ ಅವರನ್ನು ಗೆಲ್ಲಿಸಬೇಕು ಎಂದು ಕರೆನೀಡಿದರು.
ಯೋಗೇಶ್ವರ್ ವಿರುದ್ಧ ಎರಡು ಬಾರಿ ಗೆದ್ದಿದ್ದೀನಿ ಎಂದು ಕುಮಾರಸ್ವಾಮಿ ಟಿಕೆಟ್ ಕೊಡಬಹುದಿತ್ತು. ಆಗ ಅವರ ಹೃದಯ ಶ್ರೀಮಂತಿಕೆ ಗೊತ್ತಾಗೋದು. ಆದರೆ, ಸಭೆ ಮಾಡಿ ಮಗನಿಗೆ ಚನ್ನಪಟ್ಟಣ ಪ್ರವಾಸ ಮಾಡು ಅಂದ ಅವರಿಗೆ ಯೋಗೇಶ್ವರ್ ಕಣ್ಣಿಗೆ ಕಾಣಲಿಲ್ವಾ?, ನೀವು ರಾಜೀನಾಮೆ ಕೊಟ್ಟಾಗಲೇ ಮಗನಿಗೆ ಟಿಕೆಟ್ ಕೊಡುವ ತೀರ್ಮಾನ ಮಾಡಿದ್ದೀರಿ. ನಿಮ್ಮ ನಂಬಿ ಬಂದವರಿಗೆ ಏನು ಮಾಡಿಲ್ಲ. ಯಾರಿಗೂ ರಾಜಕೀಯವಾಗಿ ಶಕ್ತಿ ತುಂಬಿಲ್ಲ. ಎಲ್ಲ ಒಕ್ಕಲಿಗ ನಾಯಕರನ್ನೂ ತುಳಿಯುವುದೇ ಅವರ ಕೆಲಸ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಬಳಿ ಹಣ ಇಲ್ಲ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾತನಾಡಿ, ಕುಮಾರಸ್ವಾಮಿಗೆ ಇರೋದು ಒಂದೇ ಅಸ್ತ್ರ. ಯಥೇಚ್ಛವಾಗಿ ಹಣ ಸುರಿದು ಚುನಾವಣೆ ಮಾಡೋದು. ನನ್ನ ಬಳಿ ಅಷ್ಟು ಹಣ ಇಲ್ಲ, ಎರಡು ಬಾರಿ ಸೋತಿದ್ದೇನೆ. ಜನರೇ ನನ್ನ ಪರವಾಗಿ ಚುನಾವಣೆ ಮಾಡುತ್ತಾರೆ ಎಂದರು.
ನನ್ನ ಎಲ್ಲರೂ ಪಕ್ಷಾಂತರಿ, ಪಕ್ಷಾಂತರಿ ಎನ್ನುತ್ತಾರೆ. ಅವತ್ತು ನೀರಾವರಿ ಯೋಜನೆಗಾಗಿ ಪಕ್ಷ ಬಿಟ್ಟು ಹೋಗಿದ್ದೆ. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿದ್ದೇನೆ. ನಾನು ಡಿ.ಕೆ.ಸುರೇಶ್ ಸೇರಿ ನೀರಾವರಿ ಯೋಜನೆಗೆ ಹೆಚ್ಚು ಒತ್ತು ಕೊಡುತ್ತೇವೆ. ಎರಡು ಬಾರಿ ಸೋತಿರುವ ನನಗೆ ಈ ಬಾರಿ ಆಶೀರ್ವಾದ ಮಾಡಬೇಕು. ನನ್ನ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕು. ಕಣ್ಣೀರು ಹಾಕೋಕೆ ನನಗೆ ಬರೊಲ್ಲ. ನನಗೆ ನಾಟಕ ಆಡೋಕೆ ಬರೊಲ್ಲ ಎಂದು ಎಚ್ಡಿಕೆಗೆ ಪರೋಕ್ಷವಾಗಿ ಕುಟುಕಿದರು.
ಕುಮಾರಸ್ವಾಮಿ ಟೂರಿಂಗ್ ಟಾಕೀಸ್!! : ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಸಿದ್ದರಾಮಯ್ಯ ಬಳಿಕ ಸಿಎಂ ಆಗುವ ಎಲ್ಲ ಅವಕಾಶ ಡಿಕೆ ಶಿವಕುಮಾರ್ ಅವರಿಗಿದೆ. ಯೋಗೇಶ್ವರ್ ಗೆಲ್ಲಿಸಿದರೆ ಶಿವಕುಮಾರ್‌ಗೆ ಶಕ್ತಿ ಬರುತ್ತದೆ. ಮನೆಯವರಿಗೆ ಬಿಟ್ಟು ಬೇರೆ ಯಾರಿಗೂ ಕುಮಾರಸ್ವಾಮಿ ಟಿಕೆಟ್ ಕೊಡಲ್ಲ. ಕುಮಾರಸ್ವಾಮಿ ಟೂರಿಂಗ್ ಟಾಕೀಸ್ ತರ. ಅವರು ಎಲ್ಲೂ ನಿಲ್ಲಲ್ಲ. ಡಿ.ಕೆ.ಸುರೇಶ್ ಸೋಲನ್ನು ಮರೆಯೋಕೆ ಸಿಪಿವೈ ಗೆಲ್ಲಿಸಿ ಎಂದು ಮನವಿ ಮಾಡಿದರು.
ಯಾರನ್ನು ಬೆಳೆಸೊಲ್ಲ!!:
ಶಾಸಕ ಶಿವಲಿಂಗೇಗೌಡ ಮಾತನಾಡಿ, ಕುಮಾರಸ್ವಾಮಿ ಮಗನನ್ನು ನಿಲ್ಲಿಸೋಕೆ ಇಷ್ಟೆಲ್ಲ ಡ್ರಾಮ ಮಾಡಿದರು. ಪುತ್ರ ಎರಡು ಬಾರಿ ಸೋತಿದ್ದಾನೆ, ಅವನಿಗೆ ಪುನರ್ಜನ್ಮ ನೀಡಬೇಕು ಅಂತಾ ಚನ್ನಪಟ್ಟಣಕ್ಕೆ ನಿಲ್ಲಿಸಿದ್ದಾರೆ. ಚನ್ನಪಟ್ಟಣ ಸ್ವಾಭಿಮಾನಕ್ಕೆ ಮತ ಕೊಡಬೇಕು. ನಾಟಕ, ಸ್ವಾರ್ಥಕ್ಕೆ ಮತ ಕೊಡಬೇಡಿ. ಕುಮಾರಸ್ವಾಮಿ 25 ಸೀಟು ತೆಗೆದುಕೊಂಡರೂ ಸಿಎಂ ಆಗ್ತಾರೆ.
ಅವರಿಗೆ ಅದೊಂದು ಅದೃಷ್ಟ ಇದೆ. ಕೊಟ್ಟಿದ್ದನ್ನು ಉಳಿಸಿಕೊಳ್ಳುವ ಶಕ್ತಿ ಅವರಿಗೆ ಇಲ್ಲ. ತಾಲೂಕಿನ ಜನತೆ ಯೋಗೆಶ್ವರ್ ಗೆಲ್ಲಿಸುವ ಮುಖಾಂತರ ನಿಮ್ಮ ಸ್ವಾಭಿಮಾನ ಉಳಿಸಬೇಕು. 13 ರಂದು ನಡೆಯುವ ಚುನಾವಣೆಯಲ್ಲಿ ಹೊರಗಿನವರನ್ನು ಜಿಲ್ಲೆಯಿಂದ ಕಳಿಸಬೇಕು ಎಂದು ಕರೆನೀಡಿದರು.
ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿದರು. ನೆಲಮಂಗಲ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಬ್ಲಾಕ್ ಅಧ್ಯಕ್ಷರಾದ ಪ್ರಮೋದ್, ಸುನೀಲ್ ಕುಮಾರ್ ಸೇರಿ ಹಲವು ಮುಖಂಡರು ಇದ್ದರು.