

ಬೆಂಗಳೂರು: ಉದ್ಯಮಿಯೊಬ್ಬರ ಪುತ್ರನ ಮೇಲೆ ಹಲ್ಲೆ ಮಾಡಿದ್ದಾಗಿ ಆಂಜನೇಯ ವಜ್ಜಲ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಅವರ ತಂದೆ, ಮಾಜಿ ಶಾಸಕ ಮಾನಪ್ಪ ವಜ್ಜಲ್ ಪ್ರತಿಕ್ರಿಯೆ ನೀಡಿದ್ದಾರೆ. ಮಾತ್ರವಲ್ಲ, ಉದ್ಯಮಿಯ ಪುತ್ರ ಕುಡಿದು ಜಗಳ ತೆಗೆದಿದ್ದು, ನನ್ನ ಮಗನದ್ದೇನೂ ತಪ್ಪಿಲ್ಲ ಎಂದು ಹೇಳಿದ್ದಾರೆ.
ಉದ್ಯಮಿ ದೀಪಕ್ ರೈ ಎಂಬವರ ಪುತ್ರ ವಿಕ್ರಮ್ ರೈ ಮೇಲೆ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ವಜ್ಜಲ್ ಕಳೆದ ಭಾನುವಾರ ಬೆಂಗಳೂರಿನ ವಸಂತನಗರದ ಎಂಬೆಸಿ ಅಪಾರ್ಟ್ಮೆಂಟ್ನಲ್ಲಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದ್ದು, ಆ ಪ್ರಕರಣ ಪೊಲೀಸ್ ಠಾಣೆವರೆಗೂ ತಲಪಿತ್ತು.
ಈ ಪ್ರಕರಣ ತಡವಾಗಿ ಬೆಳಕಿಗೆ ಬಂದು, ಎಲ್ಲೆಡೆ ಸುದ್ದಿ ಹರಿದಾಡಲಾರಂಭಿಸಿದ್ದು, ಇದೀಗ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರು ಸುದ್ದಿಗಾರರಿಗೆ ಆ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ. ನನ್ನ ಮಗ ವಸಂತನಗರದ ಮನೆಯ ಮುಂದೆ ನಿಂತಾಗ ಕುಡಿದಿದ್ದ ಅಪರಿಚಿತ ವ್ಯಕ್ತಿ ಅಸಭ್ಯವಾಗಿ ವರ್ತಿಸಿ, ಹೋಗಿದ್ದಾನೆ. ಜತೆಗೆ ಎರಡನೇ ಬಾರಿಗೆ ಬಂದು ಗಲಾಟೆಗೆ ಮುಂದಾಗಿದ್ದಾನೆ, ಆಗ ಮಾತಿಗೆ ಮಾತು ಬೆಳೆದಿದೆ. ಮದ್ಯಪಾನ ಮಾಡಿದ್ದ ಆತ ತಾನೇ ಗಾಯ ಮಾಡಿಕೊಂಡಿದ್ದು, ಸಣ್ಣ ಗಾಯವಾಗಿದೆ. ನನ್ನ ಮಗನ ಕೈಯಲ್ಲಿ ಏನೂ ಇರಲಿಲ್ಲ, ಅವನು ತುಂಬಾ ಸಣ್ಣವನು ಎಂಬುದಾಗಿ ಮಾನಪ್ಪ ವಜ್ಜಲ್ ತಿಳಿಸಿದ್ದಾರೆ.
ಗಲಾಟೆ ಮಾಡಿದ್ದ ವ್ಯಕ್ತಿಯ ಮನೆ ಅಲ್ಲಿಲ್ಲ, ಬೇರೆಯವರ ಮನೆಗೆ ಪಾರ್ಟಿ ಮಾಡಲು ಬಂದು ಜಗಳ ತೆಗದಿದ್ದಾನೆ. ಆತ ಕುಡಿದು ಗಲಾಟೆ ಮಾಡಿದ್ದಕ್ಕೆ ಅಪಾರ್ಟ್ಮೆಂಟ್ ಸೆಕ್ಯುರಿಟಿ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡಿದ್ದ. ಬಳಿಕ ಪೊಲೀಸ್ ಸ್ಟೇಷನ್ಗೆ ಹೋಗಿ ರಾಜಿ ಮಾಡಿಕೊಂಡು ಬಂದಿದ್ದಾರೆ. ಅವತ್ತು ಪೊಲೀಸರೇ ಮೆಡಿಕಲ್ ರಿಪೋರ್ಟ್ ಮಾಡಿಸಿದ್ದಾರೆ. ಕುಡಿದು ಗಲಾಟೆ ಮಾಡಿದ್ದರೂ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಲಾಗಿತ್ತು. ಒಂದು ವೇಳೆ ಕುಡಿದು ಜಗಳ ತೆಗೆದ ಆ ವ್ಯಕ್ತಿ ದೂರು ನೀಡಿದರೆ ನಾವೂ ದೂರು ನೀಡುತ್ತೇವೆ. ನನ್ನ ಮಗ ಆಂಜನೇಯನಿಗೆ ಹೇಳಿ ಪ್ರತಿದೂರು ದಾಖಲಿಸುತ್ತೇನೆ. ರಾಜಿಗೆ ನಾವು ಸಿದ್ಧರಿದ್ದೇವೆ. ಆದರೆ ದೂರು ದಾಖಲಿಸುವುದನ್ನು ತಡೆದಿಲ್ಲ. ದೂರು ಕೊಟ್ಟು ನ್ಯಾಯಾಲಯದಲ್ಲೇ ಸರಿ-ತಪ್ಪು ನಿರ್ಧಾರವಾಗುವುದಾದರೂ ಆಗಲಿ ಎಂದೂ ಅವರು ಹೇಳಿದ್ದಾರೆ.