

ಬೆಂಗಳೂರು: ಮಾಜಿ ಶಾಸಕರ ಪತ್ನಿ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮಾಜಿ ಶಾಸಕರು ಗಾಯಗೊಂಡಿದ್ದಾರೆ. ಬೆಂಗಳೂರಿನ ಸಂಜಯನಗರದ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ವಿಕ್ರಮ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮಾಜಿ ಶಾಸಕ ಅನಿಲ್ ಲಾಡ್ ಹಾಗೂ ಅವರ ಪತ್ನಿ ಆರತಿ ಭಾನುವಾರ ಗೆಳೆಯನ ಮನೆಗೆ ತೆರಳಿದ್ದರು. ಅಲ್ಲಿಂದ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಮರಳುವಾಗ ನಸುಕಿನ ಜಾವ ಮೂರು ಗಂಟೆಗೆ ಸಂಜಯನಗರ ಸಿಗ್ನಲ್ನಲ್ಲಿ ಅಪಘಾತ ಸಂಭವಿಸಿದೆ. ಆರತಿ ಅವರು ತಿರುವು ತೆಗೆದುಕೊಳ್ಳುತ್ತಿರುವಾಗ ಆಯತಪ್ಪಿ ಕಾರು ಮರಕ್ಕೆ ಗುದ್ದಿದೆ. ಆರತಿ ಅವರು ನಿದ್ರೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಡಿಕ್ಕಿ ಆಗುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಆದರೂ ಅನಿಲ್ ಲಾಡ್ಗೆ ಸ್ವಲ್ಪ ಗಾಯಗಳಾಗಿದ್ದು, ಅಪಘಾತ ಸಂಭವಿಸಿದ ತಕ್ಷಣ ರಾಮಯ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್.ಟಿ.ನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.