ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ

Malikayya Gutedar
Published on

ಕಮಲ ನಾಯಕರ ನಡೆಗೆ ಬೇಸತ್ತು‌ ಕೈಹಿಡಿಯಲಿರುವ ನಾಯಕ


ಕಲಬುರಗಿ: ಬಿಜೆಪಿ ನಾಯಕರ ವರ್ತನೆಯಿಂದ ಬೇಸತ್ತ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಶುಕ್ರವಾರ(ಇಂದು ) ಏ.19 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. ಇದರಿಂದಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಈಗ ಕೈ ಹಿಡಿಯಲಿದ್ದಾರೆ. ಶುಕ್ರವಾರ ಬೆಳಗ್ಗೆ ೧೦ಕ್ಕೆ ಬೆಂಗಳೂರಿನ ಕ್ವಿನ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಅಧಿಕೃತವಾಗಿ ಕೈ ಹಿಡಿಯಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಇತರ ಮುಖಂಡರು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲದಿನ ಹಿಂದಷ್ಟೆ ಮಾಲೀಕಯ್ಯ ಸಹೋದರ ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಬೆಂಗಳೂರಿನಲ್ಲಿ ಬಿಜೆಪಿ ಸೇರಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೀಕಯ್ಯ ಬಿಜೆಪಿಯಿಂದ ಸ್ಪರ್ಧಿಸಿದಾಗ ನಿತಿನ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರಿಂದ ಇಬ್ಬರೂ ಸೋಲನುಭವಿಸಿದ್ದರು. ಸಹೋದರ ನಿತಿನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಸೌಜನ್ಯಕ್ಕೂ ತಮ್ಮೊಂದಿಗೆ ಚರ್ಚಿಸದ ಬಿಜೆಪಿ ನಾಯಕರ ನಡೆಯಿಂದ ಮಾಲೀಕಯ್ಯ ಬೇಸರ ಹೊರಹಾಕಿದ್ದರು. ಎರಡು ದಿನ ಹಿಂದೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ನಡೆಸಿ ೧೯ರೊಳಗೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net