ಕೈಗಾರಿಕಾ ಕಾರಿಡಾರ್ ಮೋದಿ ಕನಸು

BSY_Somanna
Published on

ತುಮಕೂರು: ಕಾಂಗ್ರೆಸ್ ಸರ್ಕಾರದ ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತಬೇಟೆ ನಡೆಸಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ತುಮಕೂರು ತಾಲೂಕಿನ ಕೋರಾ ಹೋಬಳಿ ಕೆಸ್ತೂರಿನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ ಬಲದಿಂದ ಎನ್‌ಡಿಎ ಅಭ್ಯರ್ಥಿ ಆಗಿ ವಿ.ಸೋಮಣ್ಣ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಬಿಎಸ್‌ವೈ ವಿಶ್ವಾಸದ ಮಾತುಗಳನ್ನಾಡಿದರು.

ಮೋದಿ ಕನಸಿನ ಕೂಸು: ಮೋದಿಯ ಕನಸಿನ ಕೂಸಾದ ಚೆನ್ನೈ ಮುಂಬೈ ಕೈಗಾರಿಕಾ ಕಾರಿಡಾರ್ ತುಮಕೂರಿಗೆ ನೀಡಿದ್ದಾರೆ. ಇದಕ್ಕೆ 7 ಸಾವಿರ ಕೋಟಿ ರೂಪಾಯಿ ಹಣ ಹರಿದು ಬರಲಿದ್ದೂ ಈ ಭಾಗ ಮತ್ತಷ್ಟು ಅಭಿವೃದ್ಧಿ ಆಗಲಿದೆ. ಕೈಗಾರಿಕಾ ಕ್ರಾಂತಿ ಆಗಲಿದೆ ಎಂಬ ಭರವಸೆಯನ್ನು ಯಡಿಯೂರಪ್ಪ ಇತ್ತರು.

ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗಕ್ಕೆ ಜಲ್ ಜೀವನ್ ಮಿಷನ್ ಯೋಜನೆ ಅಡಿ ಮನೆ, ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಮೋದಿ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದು ಗ್ರಾಮೀಣಭಾಗದಲ್ಲಿ ಪ್ರತಿಯೊಬ್ಬರಿಗು ಶುದ್ಧ ಕುಡಿಯುವ ನೀರು ಒದಗಿಸಲು ಸಂಕಲ್ಪ ಮಾಡಲಾಗಿದೆ ಎಂದರು.

ಎಲ್ಲಾ ಸಮಾಜದವರು ಸೇರಿ ಸೋಮಣ್ಣ ಅವರನ್ನ ಗೆಲ್ತಿಸಲ್ಲಿಕ್ಕೆ ಇಲ್ಲಿ ಸೇರಿದ್ದೀರಾ. ಸೋಮಣ್ಣ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಅಭಿವೃದ್ಧಿ ವಿಚಾರದಲ್ಲಿ ಸೋಮಣ್ಣ ಎತ್ತಿದಕೈ.ಪ್ರಧಾನಿ ಮೋದಿ ಹಾಗೂ ದೇವೇಗೌಡರ ಆಶೀರ್ವಾದದ ಶ್ರೀರಕ್ಷೆ ಅವರಿಗಿದ್ದು ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ಕಂಡಾಗ ದೊಡ್ಡ ಅಂತರದಲ್ಲಿ ಗೆಲ್ಲುವುದು ನಿಶ್ಚಿತ. ಸಿದ್ದಗಂಗೆಯ ಶಿವಕುಮಾರ ಶ್ರೀಗಳ ಕರ್ಮಭೂಮಿಯಾದ ತುಮಕೂರಿನ ಜನ ಪ್ರಬುದ್ಧರು. ಮೋದಿ ಕೈ ಬಲಪಡಿಸಲು ಸೋಮಣ್ಣರನ್ನು ಬೆಂಬಲಿಸುವ ವಿಶ್ವಾಸ ತಮಗಿದೆ ಎಂದು ಬಿಎಸ್‌ವೈ ಹೇಳಿದರು.

ನಾನು ಭಾಗ್ಯಲಕ್ಷ್ಮಿ, ಕಿಸಾಸ್ ಸನ್ಮಾನ್ ಯೋಜನೆಗೆ ರಾಜ್ಯದ ಪಾಲು ಕೊಟ್ಟಿದ್ದೆ. ಇದನ್ನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಲ್ಲಿಸಿದೆ. ಇಂತಹ ಅನೇಕ ಅನ್ಯಾಯ ಕೆಲಸಗಳನ್ನು ಮಾಡಿರುವ ಕಾಂಗ್ರೆಸ್‌ಗೆ ಮತ ಕೊಡುವುದು ಸಾಧ್ಯವಿಲ್ಲ. ಹಾಗಾಗಿ ಸೋಮಣ್ಣಗೆ ವೋಟು ಕೊಟ್ಟು ಸೇವೆ ಮಾಡೋದಕ್ಕೆ ಅವಕಾಶ ಮಾಡಿಕೊಡಿ ಮನವಿ ಮಾಡಿದರು.

ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶಗೌಡ, ಬಿ.ಜಿ.ಜ್ಯೋತಿಗಣೇಶ್, ಮಾಜಿ ಸಚಿವ ಭೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸೋಮಣ್ಣ ಅಂದರೆ ಅಭಿವೃದ್ಧಿ , ಅಭಿವೃದ್ಧಿ ಅಂದರೆ ಸೋಮಣ್ಣ. ಪ್ರಧಾನಿ ಮೋದಿ, ದೇವೇಗೌಡರ ಆಶೀರ್ವಾದ ಶ್ರೀರಕ್ಷೆಯಿಂದ ತುಮಕೂರಿನಲ್ಲಿ ಬಂದು ಸ್ಪರ್ಧಿಸಿದ್ದು ಅವರಿಗೆ ದೇವೇಗೌಡರ ಸಂಪೂರ್ಣ ಆಶೀರ್ವಾದ ಇದೆ. ದೇವೇಗೌಡರ ಹಾಗೂ ಮೋದಿ ನಿಕಟ ಸಂಪರ್ಕ ಹೇಗಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಸೋಮಣ್ಣ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ.
ಬಿ.ಎಸ್.ಯಡಿಯೂರಪ್ಪ
ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net