

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾಗಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಬೆಂಗಳೂರಿನ ಸದಾಶಿವನಗರದಲ್ಲಿ ಭಾನುವಾರ ಆರ್‌ಎಸ್‌ಎಸ್ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಭಾಗಿಯಾಗಿ ಸಂಘದ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಧರ್ಮ ಮತ್ತು ಸಂಸ್ಕೃತಿಗಳ ಆಧಾರದಲ್ಲಿ ಸಂಘವು ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಆರ್‌ಎಸ್‌ಎಸ್ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ನಂಬಿರುವವರಲ್ಲಿ ನಾನು ಒಬ್ಬ. ರಾಮಕೃಷ್ಣಾಶ್ರಮ ನಾಲ್ಕು ಗೋಡೆಗಳ ಮಧ್ಯೆ ಬೆಳೆದು ಪರಮಹಂಸ ಮತ್ತು ವಿವೇಕಾನಂದರ ಉಪದೇಶದಿಂದ ಪ್ರೇರೇಪಿತನಾದವನು ಎಂದು ಕೃಷ್ಣ ಹೇಳಿದರು.
ವಿಜಯದಶಮಿ ದಿನ ಯಾವುದೇ ಕೆಲಸ ಆರಂಭಿಸಿದರೂ ಯಶಸ್ವಿಯಾಗುತ್ತದೆ. ಅದೇ ದಿನದಂದು ಸಂಘ ಉದಯವಾಯಿತು. ಹಿಂದು ಸಂಘಟನೆ ಮೂಲಕ ದೇಶದ ಸ್ವಾತಂತ್ರ್ಯವನ್ನು ಸ್ಥಾಪನೆಗೊಳಿಸಬೇಕು ಎಂಬ ಉದ್ದೇಶವಾಗಿತ್ತು. ರಾಷ್ಟ್ರದ ಏಳುಬೀಳುಗಳ ಜತೆಗೆ ಹಿಂದು ಧರ್ಮ ಏಳುಬೀಳು ಬೆಸೆದುಕೊಂಡಿದೆ. ಹಿಂದು ಧರ್ಮದ ಸಂರಕ್ಷಣೆ ಮೂಲಕ ರಾಷ್ಟ್ರವನ್ನು ಪುನರ್ವೈಭದ ಸ್ಥಿತಿಗೆ ಕೊಂಡೊಯ್ಯುವತ್ತ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ಕ್ರೀಡಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ಚಂದ್ರಶೇಖರ ಜಹಗೀರದಾರ್ ತಿಳಿಸಿದ್ದಾರೆ.