

ವಿಶೇಷ ವರದಿ
ತುಮಕೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರನ್ನು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶಗೌಡ ಭೇಟಿಯಾಗಿರುವುದು ಲೋಕ ಸಮರಕ್ಕು ಮುನ್ನ ತೀವ್ರ ಕುತೂಹಲ ಮೂಡಿಸಿದೆ. ಈ ಭೇಟಿ ವೇಳೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್ಡಿಕೆಗೆ ಆಹ್ವಾನ ನೀಡಿದ್ದಾರೆಂಬ ಊಹಾಪೋಹ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದೆ. ಸಹಜವಾಗಿ ಸುರೇಶಗೌಡ ಉರುಳಿಸಿರುವ ರಾಜಕೀಯ ‘ದಾಳ’ ಜಿಲ್ಲಾ ಬಿಜೆಪಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.
ಬಿಡದಿ ಸಮೀಪ ಕೇತಗಾನಹಳ್ಳಿ ನಿವಾಸದಲ್ಲಿ ಶುಕ್ರವಾರ ಜನ್ಮದಿನದಲ್ಲಿ ಶುಭಾಶಯ ಕೋರುವ ನೆಪದಲ್ಲಿ ಭೇಟಿಯಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತಂತೆ ಚರ್ಚೆ ನಡೆಸಿರುವುದು ಲೋಕ ಸಮರ ಹಣಾಹಣಿಗೆ ವೇದಿಕೆಯನ್ನು ನಿರ್ಮಿಸಿದಂತಾಗಿದೆ. ಈ ಚರ್ಚೆ ವೇಳೆ ಎಚ್ಡಿಕೆಗೆ ಲೋಕಸಭೆಯಲ್ಲಿ ಸ್ಫರ್ಧಿಸುವಂತೆ ಬಹಿರಂಗವಾಗಿಯೇ ಆಹ್ವಾನಿಸಿದ್ದಾರೆಂಬ ಗಾಳಿಸುದ್ದಿ ಹಬ್ಬಿದೆ. ಸೀಟು ಹಂಚಿಕೆಗೆ ಮುನ್ನ ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿರುವುದು ತುಮಕೂರು ಗ್ರಾಮಾಂತರ ಕ್ಷೇತ್ರದ ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರಿಗೆ ಶಾಕ್ ನೀಡಿದೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲುವು ಪಡೆಯಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ, ದೊಡ್ಡಗೌಡರ ಕುಟುಂಬದ ಯಾವುದೇ ಸದಸ್ಯರು ಭವಿಷ್ಯದಲ್ಲಿ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಯೋಗ ಮಾಡುವ ಸಾಧ್ಯತೆ ಕ್ಷೀಣ. ಈ ಎಲ್ಲಾ ಲೆಕ್ಕಾಚಾರದ ಅರಿವಿರುವ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಉರುಳಿಸಿರುವ ರಾಜಕೀಯ ‘ದಾಳ’ ತನ್ನ ರಾಜಕೀಯ ಕಡುವೈರಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಕೊಟ್ಟಿರುವ ಟಾಂಗ್ ಎನ್ನಲಾಗಿದೆ.
ಸಮಾವೇಶಕ್ಕೆ ಪ್ಲಾನ್: ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಭಾಗದಲ್ಲಿ ಕುಮಾರಸ್ವಾಮಿ, ದೇವೇಗೌಡರ ನೇತೃತ್ವದಲ್ಲಿ ಒಂದು ಸಮಾವೇಶ ನಡೆಸಿ ರಾಜಕೀಯವಾಗಿ ಲಾಭಮಾಡಿಕೊಳ್ಳುವ ಮಾಸ್ಟರ್‌ಪ್ಲಾನ್ ಸುರೇಶಗೌಡರ ಈ ಅನಿರೀಕ್ಷಿತ ಭೇಟಿಯ ಹಿಂದಿದೆ ಎಂಬ ತರಹೇವಾರಿ ಚರ್ಚೆ ಸಹ ಜಿಲ್ಲೆಯೆಲ್ಲೆಡೆ ಹರಿದಾಡಲಾರಂಭಿಸಿದೆ.
---
ರಾಜಕೀಯ ಲಾಭಕ್ಕೆ ಎಚ್ಡಿಕೆ ಭೇಟಿ:
ರಾಜಕೀಯ ಜೀವನದ ಆರಂಭದಿಂದಲೂ ಜೆಡಿಎಸ್ ವಿರುದ್ಧ ತೊಡೆತಟ್ಟಿರುವ ಬಿ.ಸುರೇಶ್‌ಗೌಡ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಭವಿಷ್ಯದಲ್ಲಿ ಲಾಭ ಮಾಡಿಕೊಳ್ಳಲಷ್ಟೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಲೋಕ ಸಮರ ವೇಳೆಯ ಈ ಭೇಟಿ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಎಚ್ಡಿಕೆ ಆಹ್ವಾನಿಸಿದ್ದಾರೆ ಎಂಬ ಸುದ್ಧಿಗೆ ರೆಕ್ಕೆಪುಕ್ಕ ಬಂದಿದೆ.
ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯ ನಂತರ ಜೆಡಿಎಸ್‌ನಲ್ಲಿ ಉಳಿದಿರುವ ನಿಷ್ಠಾವಂತ ಮುಖಂಡರನ್ನು ಬಿಜೆಪಿಗೆ ಸೆಳೆಯುವ ರಾಜಕೀಯ ಚದುರಂಗದಾಟದ ಭಾಗವೇ ಕುಮಾರಸ್ವಾಮಿ ಭೇಟಿ ಎನ್ನಲಾಗಿದೆ.
ಎಸ್‌ಪಿಎಂಗೆ ಕೈಕೊಟ್ಟರೆ ?
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತನ್ನ ಗೆಲುವಿಗಾಗಿ ಪ್ರಚಾರಕ್ಕೆ ಬಳಸಿಕೊಂಡಿದ್ದ ಬಿ.ಸುರೇಶ್‌ಗೌಡ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಲೋಕಸಭೆ ಟಿಕೆಟ್ ನೀಡಬೇಕು ಎಂದು ಪಕ್ಷದ ಆಂತರಿಕವಲಯದಲ್ಲಿ ಹೇಳುತ್ತಿದ್ದರಾದರೂ ಸೀಟು ಹಂಚಿಕೆಯ ಮೊದಲೇ ಎಲ್ಲರನ್ನೂ ಓವರ್‌ಟೇಕ್ ಮಾಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆಂಬುದು ಎಸ್ಪಿಎಂ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.