ಪರಿಶಿಷ್ಟರ ಅಂತ್ಯಕ್ರಿಯೆ ಸಹಾಯಧನ ಚೆಕ್ ಬೌನ್ಸ್ ಆಗುವ ಮಟ್ಟಕ್ಕೆ ಸರ್ಕಾರ ದಿವಾಳಿ ಆಗಿದೆ: ಬಿಎಸ್‌ವೈ ವಾಗ್ಧಾಳಿ

BSY_Bara111
Published on

ತುಮಕೂರು: ಪರಿಶಿಷ್ಟರ ಅಂತ್ಯಕ್ರಿಯೆ ಸಹಾಯಧನದ ಚೆಕ್ ಕೂಡ ಬೌನ್ಸ್ ಆಗುವ ಮಟ್ಟಕ್ಕೆ ಈ ಸರ್ಕಾರ ದಿವಾಳಿ ಹಂತಕ್ಕೆ ತಲುಪಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ಧಾಳಿ ನಡೆಸಿದರು.

ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸಕ್ಕೆ ತೆರಳುವ ಮುನ್ನ ಸೋಮವಾರ ನಗರದಲ್ಲಿ ಕೈಗಾರಿಕೋದ್ಯಮಿಗಳ ಜತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನಗತ್ಯವಾಗಿ ಕೆಲವು ಉಚಿತ ಸೇವೆಗಳನ್ನು ಜನತೆಗೆ ಕೊಟ್ಟಿರುವ ಪರಿಣಾಮ ಸರ್ಕಾರ ದಿವಾಳಿಗೆ ಸ್ಥಿತಿಗೆ ತಲುಪಿದ್ದು ಈ ಸಂಕಷ್ಟವನ್ನು ಕೈಗಾರಿಕೋದ್ಯಮಿಗಳು, ಜನರು, ರೈತರು ಅನುಭವಿಸಬೇಕಾದ ದುಸ್ಥಿತಿಗೆ ದೂಡಲಾಗಿದೆ. ಸರ್ಕಾರ ಸತ್ತಂತಿದೆ ಎಂದರು.

ಜಿಲ್ಲೆಯಲ್ಲಿನ ಸಚಿವರಿಬ್ಬರು ರೈತರು, ಜನರ, ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದು ನಿಜಕ್ಕೂ ವಿಪರ್ಯಾಸವೆನಿಸಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಒಂದುಕಡೆ ಆದರೆ, ಮತ್ತೊಂದು ಕಡೆ ವಿದ್ಯುತ್ ದರ ಹೆಚ್ಚಳದಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ತುತ್ತಾಗಿವೆ. ಅಕ್ಕಿ ಗಿರಣಿ ಮಾಲೀಕರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಕೈಗಾರಿಕೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಈ ಜ್ವಲಂತ ಸಮಸ್ಯೆಗಳನ್ನು ಎದುರಿಸಲು ನಿಮ್ಮೊಟ್ಟಿಗೆ ನಿಂತು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇನೆ ಎಂದು ಬಿಎಸ್‌ವೈ ಭರವಸೆಯಿತ್ತರು.

ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಂಎಲ್ಸಿ ಎನ್.ರವಿಕುಮಾರ್, ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶಗೌಡ ಮತ್ತಿತರರು ಉಪಸ್ಥಿತರಿದ್ದರು.

ಮಳೆ ಮಾತ್ರ ಅಲ್ಲ .. ಗಾಳಿಯು ಬೀಸುತ್ತಿಲ್ಲ..!!

ಸಿದ್ದರಾಮಯ್ಯ ಸಿಎಂ ಆದಾಗಿನಿಂದ ಮಳೆ ಮಾತ್ರ ಅಲ್ಲ, ಗಾಳಿಯೂ ಸರಿಯಾಗಿ ಬೀಸುತ್ತಿಲ್ಲ ಎಂದು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ಮಳೆ ಆಗಿಲ್ಲ. ಎಲ್ಲೆಡೆ ಬರ ತಾಂಡವವಾಡುತ್ತಿದ್ದು ಜಲಾಶಯಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ವಿದ್ಯುತ್ ಉತ್ಪಾದನೆಯಲ್ಲೂ ಬರ ಬಂದಿದ್ದು ಪವನ ವಿದ್ಯುತ್ ಕೇಂದ್ರದಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಸಿದ್ದರಾಮಯ್ಯ ಸಿಎಂ ಆದಾಗಿಂದ ಮಳೆ ಮಾತ್ರ ಅಲ್ಲ ಗಾಳಿಯೂ ಸರಿಯಾಗಿ ಬೀಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಜನರಿಗೆ ಮಕ್ಮಲ್ ಟೋಪಿ ಹಾಕಿ ಈ ಸರ್ಕಾರವು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತೀವ್ರ ಬರಗಾಲ ಬಂದಿದೆ. ರೈತರಿಗೆ 7 ಗಂಟೆಗಳ ಬದಲು ಕೇವಲ 3 ಗಂಟೆ ತ್ರೀಫೇಸ್ ವಿದ್ಯುತ್ ಕೊಡಲಾಗುತ್ತಿದೆ. ದಸರಾ ಕಲಾವಿದರಿಗೆ ಕೊಡುತ್ತಿರುವ ಚೆಕ್ ಬೌನ್ಸ್ ಆಗಿದೆ. ರಾಜ್ಯ ಸರ್ಕಾರದ ದಿವಾಳಿ ಹತ್ತಿರದಲ್ಲಿ ಇದೆ ಎಂದರು.

ಕತ್ತಲೆ ಭಾಗ್ಯವನ್ನು ಸಿದ್ದರಾಮಯ್ಯ ಕಲ್ಪಿಸಿರುವುದಾಗಿ ಗ್ರಾಮೀಣ ಜನರು ದೂರುತ್ತಿದ್ದಾರೆ. ಎರಡು ಲಕ್ಷ ಸಂಬಳ ತೆಗೆದುಕೊಳ್ಳುವರಿಗೂ ಉಚಿತ ವಿದ್ಯುತ್ ಕೊಟ್ಟು ದಿವಾಳಿ ಮಾಡಿದ್ದಾರೆ. ದಿನ ಬೆಳಗಾದರೆ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಪರಮೇಶ್ವರ್, ಡಿ.ಕೆ.ಶಿವಕುಮಾರ್, ಜಾರಕಿಹೊಳಿ ಸಿಎಂ ಆಗಲು ಆಂತರಿಕ ಸಂಘರ್ಷದಲ್ಲಿ ತೊಡಿಗಿದ್ದಾರೆ. ಇಂತಹ ಸರ್ಕಾರದಿಂದ ರಾಜ್ಯ ದಿವಾಳಿ ಅಂಚಿಗೆ ತಲುಪುತ್ತಿದೆ ಎಂದು ಸುರೇಶಗೌಡ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net