ಕಾಂಗ್ರೆಸ್ ಸರ್ಕಾರ ಪಾಪರ್: ಬಿಎಸ್‌ವೈ ವಾಗ್ಧಾಳಿ

BSY_Govt
Published on

ತುಮಕೂರು: ಬಿಜೆಪಿ ಸರ್ಕಾರದ ಅವಧಿಯ ಜನಪರ ಯೋಜನೆಗಳನ್ನು ನಿಲ್ಲಿಸಿರುವುದು ನೋಡಿದರೆ ಈ ಸರ್ಕಾರ ಪಾಪರ್ ಆಗಿರುವುದು ಸ್ಪಷ್ಟವಾಗಿದೆ. ಈ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ಧಾಳಿ ನಡೆಸಿದರು.

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ನಾಮಪತ್ರ ಸಲ್ಲಿಸುವ ರೋಡ್ ಶೋ ನಲ್ಲಿ ಅಬ್ಬರಿಸಿದ ಬಿಎಸ್‌ವೈ, ದೇಶದ ಸುಭದ್ರತೆ, ಅಭಿವೃದ್ಧಿಗೆ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎಂದು ಕರೆ ನೀಡಿದರು. ರೋಡ್ ಶೋನಲ್ಲಿ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳ ಇಷ್ಟೊಂದು ಜನ ಸೇರಿರುವುದು ದಾಖಲೆ ಎನಿಸಿದೆ. ಇದು ಸೋಮಣ್ಣ ಅವರ ಗೆಲುವಿನ ಮುನ್ಸೂಚನೆ ಎಂಬ ವಿಶ್ವಾಸದ ಮಾತುಗಳನ್ನಾಡಿದರು.

ವಿ.ಸೋಮಣ್ಣ ಜನಪ್ರಿಯತೆ ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ. ಇವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ, ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ದೇಶದ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಜತೆಗೆ ನಾನು ಸಿಎಂ ಆಗಿದ್ದಾಗ 4 ಸಾವಿರ ರೂ., ಸೇರಿಸಿ 10 ಸಾವಿರ ರೂ.,ಗಳನ್ನು ರೈತರ ಖಾತೆಗೆ ನೇರ ಜಮಾ ಮಾಡುತ್ತಿದ್ದೆವು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ಹಣ ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದೆ. ಭಾಗ್ಯಲಕ್ಷ್ಮಿ ಯೋಜನೆ ಕೂಡ ಕೊಕ್ ನೀಡಿದೆ. ಈ ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ನಿಲ್ಲಿಸಿರುವುದು ನೋಡಿದರೆ ಸರ್ಕಾರ ಪಾಪರ್ ಆಗಿರುವುದು ಸ್ಪಷ್ಟವಾಗಿದೆ. ಈ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕತೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net