ಉತ್ತಮ ಬದುಕಿಗೆ ದುಶ್ಚಟಗಳು ಮಾರಕ

31CBP3
ಚಿಕ್ಕಬಳ್ಳಾಪುರದ ಸರ್ ಎಂ.ವಿ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಸರ್. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಿವ ಕುಮಾರ್, ಪ್ರಾಂಶುಪಾಲ ಜಿ.ವಿ. ಹನುಮಂತರೆಡ್ಡಿ ಮತ್ತಿತರರು ಇದ್ದರು.
Published on


ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿಕೆ ದೇಶದಲ್ಲಿ ಶೇ.28 ಜನ ತಂಬಾಕು ವ್ಯಸನಿಗಳು

ಚಿಕ್ಕಬಳ್ಳಾಪುರ: ಉತ್ತಮ ಬದುಕಿಗೆ ದುಶ್ಚಟಗಳು ಕಂಟಕವಾಗುತ್ತವೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸರ್ ಎಂ.ವಿ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕುರಹಿತ ದಿನ ಉದ್ಘಾಟಿಸಿ ಮಾತನಾಡಿದರು.

ಕುತೂಹಲ, ಆಕರ್ಷಣೆಗೆ ಒಳಗಾಗಿ ವಿದ್ಯಾರ್ಥಿ, ಯುವ ಜನರಲ್ಲಿ ಆರಂಭವಾಗುವ ತಂಬಾಕು ಉತ್ಪನ್ನಗಳ ಸೇವನೆಯು ಕೊನೆಗೆ ಚಟವಾಗಿ ಪರಿವರ್ತನೆಯಾಗುತ್ತದೆ. ನಿಧಾನವಾಗಿ ಇಡೀ ಬದುಕನ್ನೇ ಸರ್ವನಾಶ ಮಾಡಿ ಬಿಡುತ್ತದೆ ಎಂದರು.

ಆತಂಕಕಾರಿ ಬೆಳವಣಿಗೆ
ಅಂದಾಜಿನ ಪ್ರಕಾರ ಪ್ರಸ್ತುತ ಭಾರತದಲ್ಲಿ ಶೇ.28ರಷ್ಟು ಜನ ತಂಬಾಕು ವ್ಯಸನಿಗಳಿದ್ದು, ಅಪಾಯಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದರೂ ಬಳಕೆದಾರರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ದುಶ್ಚಟಗಳ ಅಭ್ಯಾಸ ಸುಲಭ. ಆದರೆ, ತ್ಯಜಿಸುವುದು ತುಂಬಾ ಕಷ್ಟ ಎಂಬುದನ್ನು ಅರಿಯಬೇಕು. ಯುವಜನರು ತಂಬಾಕು ಉತ್ಪನ್ನಗಳಿಂದ ದೂರವಿದ್ದು ಆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಿ.ಎನ್. ರವೀಂದ್ರ ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ. ಗಂಟಲು, ಶ್ವಾಸಕೋಶ, ನರಗಳು ದುರ್ಬಲಗೊಂಡು, ಕೊನೆಗೆ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಅನ್ಯರು ಮಾಡುವ ಧೂಮಪಾನ ಕೂಡ ಸಮೀಪವರ್ತಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣಪ್ರಸಾದ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಂ.ಪ್ರಕಾಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್, ಮನೋವೈದ್ಯ ಡಾ.ನಂದ ಕಿಶೋರ್, ಎನ್‌ಒಎಚ್‌ಪಿ ನೋಡಲ್ ಆರೋಗ್ಯ ಅಧಿಕಾರಿ ಡಾ.ಚಿತ್ತ್ ಕಲಾ ಉಮೇಶ್ ಪಾಟೀಲ್, ಸರ್ ಎಂವಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಿ.ವಿ. ಹನುಮಂತರೆಡ್ಡಿ ಇತರರು ಇದ್ದರು.


ಗಮನಸೆಳೆದ ನಾಟಕ
ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸರ್ ಎಂ.ವಿ. ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳ ಕುರಿತು ನಾಟಕ ಪ್ರದರ್ಶಿಸಿ ಗಮನ ಸೆಳೆದರು.


ಕಾನೂನು ಅರಿವು ನೆರವು
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ವಕೀಲರ ಸಂಘದಿಂದ ವಿಶ್ವ ತಂಬಾಕು ನಿಷೇಧ ದಿನಾಚರಣೆ, ಸೈಬರ್ ಕ್ರೈಂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ.ಉಮೇಶ್ ಉದ್ಘಾಟಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಕು ಪ್ರಾಂಶುಪಾಲ ಮುನಿರಾಜು ವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಝಾ ಇಮಾಮ್ ಖಾಸೀಂ, ವಕೀಲರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮುರಳೀ ಮೋಹನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net