ಅನಧಿಕೃತ ಮನೆಗಳ ತೆರವು

25 GBD
ಗೌರಿಬಿದನೂರಿನ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹಿರೇಬಿದನೂರು ಗ್ರಾಪಂ ಹಿಂಭಾಗ ಹಲವು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದವರನ್ನು ತಾಲೂಕು ಆಡಳಿತದ ವತಿಯಿಂದ ತೆರವುಗೊಳಿಸಲಾಯಿತು.
Published on


ಹಿರೇಬಿದನೂರು ಕೆರೆ ಜಾಗದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ- ಏಕಾಏಕಿ ಕ್ರಮಕ್ಕೆ ನಿವಾಸಿಗಳ ದಿಗ್ಭ್ರಮೆ ಕೆಲವರಿಗೆ ಸೋಮವಾರದವರೆಗೆ ಗಡುವು

ಗೌರಿಬಿದನೂರು: ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹಿರೇಬಿದನೂರು ಗ್ರಾಮ ಪಂಚಾಯಿತಿ ಹಿಂಭಾಗ ಹಲವು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದವರನ್ನು ತೆರವುಗೊಳಿಸಲಾಯಿತು.
ಸುಮಾರು 20 ನಿರ್ಗತಿಕರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ವಾಸಿಸುತ್ತಿದ್ದರು. ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನೇತೃತ್ವದ ತಂಡ ಪೊಲೀಸ್ ಬಂದೋಬಸ್ತ್‌ನಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಿತು. ಮೊದಲಿಗೆ ಐದು ಮನೆಗಳ ಜತೆಗೆ ಐದು ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು, ಉಳಿದವರಿಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿದೆ.

ಬಡವರ ಕಣ್ಣೀರು
ನಮಗೆ ವಾಸಿಸಲು ಜಾಗವಿಲ್ಲದ ಕಾರಣ ಈ ಜಾಗದಲ್ಲಿ ತಾತ್ಕಾಲಿಕವಾಗಿ ಸಣ್ಣ ಮನೆಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಆದರೆ ಈಗ ಕನಿಷ್ಠ ನೋಟಿಸ್ ಕೂಡ ಜಾರಿಗೊಳಿಸದೆ ಏಕಾಏಕಿ ತೆರವುಗೊಳಿಸಲಾಗುತ್ತಿದೆ. ಮನೆಗಳನ್ನು ಕೆಡವಲಾಗಿದೆ. ಈಗ ಬೀದಿಪಾಲಾಗಿದ್ದೇವೆ. ಎಲ್ಲಿಗೆ ಹೋಗುವುದು ಎಂದು ನಿವಾಸಿಗಳು ಕಣ್ಣೀರಿಟ್ಟರು.
ಮನೆ ಇಲ್ಲದ ನಿರ್ಗತಿಕರ ಬಗ್ಗೆ ಪರಿಶೀಲನೆ ನಡೆಸಿ ಅವರಿಗೆ ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುವುದು. ಸೂರಿನ ವ್ಯವಸ್ಥೆ ಕಲ್ಪಿಸಲು ಶ್ರಮಿಸಲಾಗುವುದು ಎಂದು ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ತಿಳಿಸಿದರು.


ನನಗೆ ಪತಿ ಇಲ್ಲ. ಹೇಳದೆ ಕೇಳದೆ ಖಾಲಿ ಮಾಡಿಸಿದರೆ ಏನು ಮಾಡುವುದು? ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಲಿ. ನಮಗೆ ಸಹಾಯ ಮಾಡುವವರೇ ಇಲ್ಲ. ಬಾಡಿಗೆ ಮನೆ ಮಾಡಿಕೊಳ್ಳುವುದು ಕೂಡ ಕಷ್ಟವಾಗಿದೆ.
- ಕುಬ್ರಾನ್, ಸ್ಥಳೀಯ ವಾಸಿ


ಇಪ್ಪತ್ತು ವರ್ಷಗಳಿಂದ ಇಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ. ಆದರೆ ಈಗ ಏಕಾಏಕಿ ಜಾಗ ಖಾಲಿ ಮಾಡಿಸುತ್ತಿದ್ದಾರೆ. ದೊಡ್ಡವರು ಇವರ ಕಣ್ಣಿಗೆ ಕಾಣುವುದಿಲ್ಲ. ನಮ್ಮಂತಹ ಬಡವರ ಮೇಲೆಯೇ ಇವರ ಕಣ್ಣು. ಅನ್ಯಾಯವಾದರೂ ಕೇಳುವವರಿಲ್ಲ.
- ಬಿ.ಬತುಲ್, ಸ್ಥಳೀಯ ವಾಸಿ


ಒತ್ತುವರಿದಾರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ಸರ್ವೇ ನಂ. 202ರ ಕೆರೆ ಸೇರಿದ ಸುಮಾರು 1 ಎಕರೆ 25 ಗುಂಟೆ ಜಾಗದಲ್ಲಿ 20 ಮನೆಗಳನ್ನು ನಿರ್ಮಿಸಿಕೊಂಡಿದ್ದು, ಇದು ಕೆರೆ ಅಂಗಳವನ್ನು ಕಬಳಿಸುವ ಹುನ್ನಾರ ಆಗಿದೆ. ಎಲ್ಲರಿಗೂ ಬೇರೆ ಕಡೆ ಮನೆ ಇದ್ದು, ಕೆರೆ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಇದು ಅಕ್ಷಮ್ಯ ಅಪರಾಧವಾಗಿದೆ. ಒಂದು ವೇಳೆ ಇವರಿಗೆ ಮನೆ ಬೇಕಾದಲ್ಲಿ ನಗರಸಭೆಗೆ ಅರ್ಜಿ ಸಲ್ಲಿಸಿದರೆ, ಸೂಕ್ತ ಸೂರಿನ ವ್ಯವಸ್ಥೆ ಮಾಡಲಾಗುವುದು. ಇದಲ್ಲದೆ ನಗರ ಪ್ರದೇಶದಲ್ಲಿ ಅನೇಕ ಕಡೆ ಒತ್ತುವರಿ ಮಾಡಿಕೊಳ್ಳಲಾಗಿದೆ. ರಾಜಕಾಲುವೆಯನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಎಚ್ಚರಿಕೆ ನೀಡಿದರು. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net