

ಗಂಗಾಧರ್ ಬೈರಾಪಟ್ಟಣ ರಾಮನಗರ
ಲೋಕಸಭೆ ಚುನಾವಣೆ ಮುಗಿದು ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ ಈಗ ಎಲ್ಲರ ಚಿತ್ತ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಮೇಲೆ ನೆಟ್ಟಿದೆ.
ಮಂಡ್ಯ ಸಂಸದರಾಗಿ ಕೇಂದ್ರದ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು ಈಗ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದರು ಎನ್ನುವಂತೆ ಎಚ್‌ಡಿಕೆ ರಾಜೀನಾಮೆ ನೀಡುವ ಮುನ್ನವೇ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ವರ್ ಬರುತ್ತಾರಂತೆ, ಇಲ್ಲ ನಿಖಿಲ್‌ಗೆ ಅವಕಾಶ ಮಾಡಿಕೊಡುತ್ತಾರಂತೆ ಎನ್ನುವ ಮಾತುಗಳು ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್‌ನಿಂದ ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಫರ್ಧಿಸಿ, ರಾಜ್ಯದಲ್ಲಿ ರಾಜಕಾರಣ ಮಾಡುತ್ತಾರಂತೆ ಎನ್ನುವ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ರಾಜ್ಯದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಇರುವ ಕಾರಣ ಹಾಗೂ ಚನ್ನಪಟ್ಟಣದಲ್ಲಿ ಹಾಲಿ ಜೆಡಿಎಸ್ ಶಾಸಕರಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಕಣಕ್ಕೆ ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಲಭ್ಯ ಮಾಹಿತಿ ಪ್ರಕಾರ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣದಿಂದ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತ. ಅಲ್ಲದೆ, ಯಾವ ಚಿಹ್ನೆಯಡಿ ಸ್ಪರ್ಧೆ ಮಾಡಬೇಕು ಎನ್ನುವ ಬಗ್ಗೆಯೂ ಭಾನುವಾರ ದೆಹಲಿಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್ ಸಹಿತ ಪ್ರಮುಖ ನಾಯಕರು ಮಾತುಕತೆ ನಡೆಸಿ ಅಂತಿಮವಾಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡುವ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಅಲ್ಪ ಸಂಖ್ಯಾತ ಮತ್ತು ಬಿಜೆಪಿ ವಿರೋಧಿ ಮತಗಳು ಚದುರಿ ಹೋಗದಂತೆ ತಡೆಯುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿದು ಬಂದಿದೆ.
ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸೋಲುತ್ತಿದ್ದಂತೆ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಚರ್ಚೆ ಆರಂಭಗೊಂಡಿತ್ತು. ಆದರೆ, ಇದನ್ನು ಡಿ.ಕೆ.ಸುರೇಶ್ ಅಲ್ಲಗಳೆದಿದ್ದಾರೆ. ನಾನು ಚನ್ನಪಟ್ಟಣದಿಂದ ಸ್ಪರ್ಧಿಸಲ್ಲ ಎನ್ನುವ ಸ್ಪಷ್ಟ ನುಡಿಗಳನ್ನು ಸುರೇಶ್ ಸೋಮವಾರದ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರು ಇದ್ದು, ಅವರಲ್ಲಿ ಒಬ್ಬರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಎನ್ನುವ ವಿಶ್ವಾಸದ ನುಡಿಗಳು ಅವರಿಂದ ಹೊರ ಬಿದ್ದಿವೆ. ಇದರೊಂದಿಗೆ ಸದ್ಯಕ್ಕೆ ಡಿ.ಕೆ.ಸುರೇಶ್ ಸ್ಪರ್ಧೆ ವಿಚಾರ ಪಕ್ಕಕ್ಕೆ ಸರಿದಂತೆ ಆಗಿದೆ.
ಡಿ.ಕೆ.ಸುರೇಶ್ ಸ್ಪರ್ಧೆ ಮಾಡುವುದಿಲ್ಲ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಹಲವರು ಈಗಾಗಲೇ ಟವೆಲ್ ಹಾಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2018, 2023 ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿ ಎಂದು ಒಮ್ಮೆ ಎಚ್.ಎಂ.ರೇವಣ್ಣ ಮತ್ತೊಮ್ಮೆ ಡಿಸಿಸಿ ಅಧ್ಯಕ್ಷ ಎಸ್. ಗಂಗಾಧರ್ ಅವರನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್ ನೆಲ ಕಚ್ಚಿದೆ. ಆದರೆ, ಈ ಬಾರಿ ಎದುರಾಳಿಗಳನ್ನು ಎದುರಿಸುವ ಸಮರ್ಥ ಸ್ಥಳೀಯ ಅಭ್ಯರ್ಥಿ ಯಾರು ಎನ್ನುವ ಚರ್ಚೆಯೂ ಹುಟ್ಟಿಕೊಂಡಿದೆ. ಒಟ್ಟಾರೆ ಎಚ್.ಡಿ.ಕೆ ರಾಜೀನಾಮೆಗೂ ಮುನ್ನವೇ ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಬಿಸಿ ಏರತೊಡಗಿದ್ದು, ಚುನಾವಣೆ ಘೋಷಣೆ ಆದ ನಂತರ ಇದು ವ್ಯಾಪಕ ರೂಪ ಪಡೆದುಕೊಳ್ಳಲಿದೆ.