ಮಕ್ಕಳ ಕಲಿಕೆಗೆ ಉತ್ತಮ ಪರಿಸರ ಮುಖ್ಯ

mgd
ಮಾಗಡಿ ತಾಲೂಕಿನ ಕೆಬ್ಬೆಪಾಳ್ಯ ಶ್ರೀಗುಡ್ಡದ ಗಾಯತ್ರಿದೇವಿ ದೇವಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನ ಪ್ರಯುಕ್ತ ಸಸಿ ನೆಡಲಾಯಿತು.ಗೂರೂಜಿ ಎಂ.ಸುರೇಶ್. ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಟಿ.ಮಂಜುನಾಥ್. ಸಮಾಜ ಸೇವಕ ರೋಹಿತಾಶ್ವ, ನಟರಾಜಪ್ಪ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಮಾಗಡಿ
ಸ್ವಾರ್ಥ, ಅತಿಯಾದ ಆಸೆ ಬೇಡ, ಮನುಕುಲದ ಉಳಿವಿಗಾಗಿ ಪರಿಸರ ಉಳಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಗುಡ್ಡದ ಗಾಯತ್ರಿದೇವಿ ದೇವಾಲಯದ ಗೂರೂಜಿ ಎಂ.ಸುರೇಶ್ ಅಭಿಪ್ರಾಯಪಟ್ಟರು.


ತಾಲೂಕಿನ ಕೆಬ್ಬೆಪಾಳ್ಯ ಶ್ರೀ ಗುಡ್ಡದ ಗಾಯತ್ರಿದೇವಿ ದೇವಾಲಯದ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸಾಮಾಜಿಕ ವಲಯ ಅರಣ್ಯ ಇಲಾಖೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾಡಿದ್ದರೆ ಮಳೆ, ಮಳೆ ಬಿದ್ದರೆ, ಕೈತುಂಬ ಬೆಳೆ, ಆಗ ಮಾತ್ರ ಮನುಕುಲ, ಪ್ರಾಣಿ-ಪಕ್ಷಿಗಳ ಸಂಕುಲ ಜೀವಂತವಾಗಿ ಉಳಿಯಲು ಸಾಧ್ಯ. ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಯು ಕನಿಷ್ಠ 10 ಸಸಿಗಳನ್ನಾದರೂ ನೆಟ್ಟು ಪೋಷಿಸಬೇಕು. ಮನೆ, ಶಾಲಾ-ಕಾಲೇಜು ಇತರೆಡೆ ಪರಿಸರದ ಸ್ವಚ್ಛತೆ ಕಾಪಾಡಬೇಕು. ಹನಿ ನೀರು ಸಂರಕ್ಷಣೆ ಮಾಡುವ ಮೂಲಕ ಉಳಿಸಬೇಕು. ವಾಯು ಮಾಲಿನ್ಯವಾಗದಂತೆ ಕಾಯ್ದುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಅಗತ್ಯ. ಈ ಮೂಲಕ ಪ್ರತಿಯೊಬ್ಬರು ಪರಿಸರ ಸ್ನೇಹಿ ಜೀವನ ಕ್ರಮ ಅನುಸರಿಸಬೇಕಿದೆ. ದೇವಾಲಯದ ಸುತ್ತಮುತ್ತ 500 ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಉಳಿಸುವ ಕೆಲಸಕ್ಕೆ ಕೈ ಹಾಕಲಾಗಿದೆ ಎಂದರು.


ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಟಿ.ಮಂಜುನಾಥ್ ಮಾತನಾಡಿ, ಇಲಾಖೆಯಿಂದ ವಿವಿಧ ಜಾತಿಯ 80 ಸಾವಿರ ಸಸಿಗಳನ್ನು ಬೆಳೆಸಲಾಗುತ್ತಿದ್ದು, ತಲಾ ಒಂದು ಸಸಿಗೆ 3 ಮತ್ತು 6 ರೂಪಾಯಿ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುವುದು. ನರೇಗಾ ಯೊಜನೆಯಡಿ ಜಾಬ್‌ಕಾರ್ಡ್ ಹೊಂದಿರುವ ರೈತರಿಗೆ ಉಚಿತ ಸಸಿ ನೀಡಲಾಗುವುದು. ಪ್ರತಿಯೊಬ್ಬರೂ ತಮ್ಮಮನೆಗಳ ಮುಂದೆ ಸಸಿ ನೆಟ್ಟು ಪೋಷಿಸಿದರೆ ಪರಿಸರ ಉಳಿಸಲು ಸಾಧ್ಯ ಎಂದರು.


ಇತ್ತೀಚಿನ ದಿನಗಳಲ್ಲಿ ಮರಗಳೆಲ್ಲ ಧರೆಗೆ ಉರುಳಿದ್ದು, ನೆರಳು ಇಲ್ಲದೆ ಜನತೆ ಬಿಸಿಲಿನ ತಾಪದಿಂದ ತತ್ತರಿಸಿ ಹೋಗುತ್ತಿದ್ದಾರೆ. ಭೂಮಿಯ ಅಸಮತೋಲನೆ ಮತ್ತು ಪರಿಸರ ಮಾಲಿನ್ಯದಿಂದ ಮಾನವ ಕುಲಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿ ಮಂಡ್ಯದಲ್ಲಿ 43 ಡಿಗ್ರಿ, ಮಾಗಡಿಯಲ್ಲಿ 40 ಡಿಗ್ರಿಯಷ್ಟು ಬಿಸಿಲಿನ ತಾಪಮಾನ ದಾಖಲಾಗಿದ್ದು, ಇದನ್ನೂ ಕಡಿಮೆ ಮಾಡಲು ಗಿಡ, ಮರಗಳನ್ನು ಬೆಳೆಸುವುದು ಅಗತ್ಯ ಎಂದರು.


ಸಮಾಜ ಸೇವಕ ರೋಹಿತಾಶ್ವ ಮಾತನಾಡಿ, ಪರಿಸರ ಮತ್ತು ಪ್ರಕೃತಿ ಮನುಷ್ಯನ ಜೀವನಾಡಿಗಳಾಗಿವೆ, ಇವುಗಳನ್ನು ಸಂರಕ್ಷಿಸಿ ಉಳಿಸುವ ಕೆಲಸ ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿ ಸಂಪನ್ಮೂಲಗಳು ಅತ್ಯಂತ ಬೆಲೆ ಕಟ್ಟಲಾಗದಂತಹ ಸಂಪನ್ಮೂಲವಾಗಿದೆ. ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡದೆ ತಮ್ಮ ಮನೆಯಲ್ಲಿ ನಡೆಯುವ ಶುಭ ಕಾರ್ಯದ ವೇಳೆ ಸಸಿ ನೆಟ್ಟು ಕಾರ್ಯಕ್ರಮ ಮಾಡಿದರೆ ಪರಿಸರ ಸಂರಕ್ಷಣೆಗೆ ಒತ್ತು ನೀಡಿದಂತಾಗುತ್ತದೆ ಎಂದರು.

ಸಾಮಾಜಿಕ ವಲಯ ಅರಣ್ಯ ಇಲಾಖೆಯ ಗಸ್ತುಪಾಲ ಆರ್.ಚೇತನ್ , ದೇವಾಲ ಆಡಳಿತ ಮಂಡಳಿಯ ನಟರಾಜಪ್ಪ, ಶಿವಕುಮಾರ್, ಪ್ರತಿಭಾ, ಬಾಲಾಜಿ, ಎಪಿಎಂಸಿ ಮಾಜಿ ನಿರ್ದೆಶಕ ಜಯಕುಮಾರ್, ಕೀರ್ತಿ, ರಂಗಣ್ಣ, ಗಣೇಶ್, ಶಿಲ್ಪಾ, ಲತಾ, ಅಂಬಿಕಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net