ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಿ

30M.D.R.1
Published on

ಮದ್ದೂರು: ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದರಿಂದ ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಪರ್ವಿಜ್ ಅಹಮದ್ ಕರೆ ನೀಡಿದರು.

ತಾಲೂಕಿನ ಕೊಪ್ಪದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಸುಮಾರು 60 ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಸ್ಕೂಲ್ ಬ್ಯಾಗ್‌ಗಳನ್ನು ಶುಕ್ರವಾರ ವಿತರಿಸಿ ಮಾತನಾಡಿ, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಈ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕೆಂದು ಮನವಿ ಮಾಡಿದರು.

ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುವ ಜತೆಗೆ ನುರಿತ ಶಿಕ್ಷಕರು ಇರುವುದರಿಂದ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆದು ಉತ್ತಮ ಅಂಕಗಳನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಸಲಹೆ ನೀಡಿದರು.

ಸರ್ಕಾರದ ಜತೆಗೆ ದಾನಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಕೂಡ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸುವ ಮೂಲಕ ಸರ್ಕಾರಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಗ್ರಾಮದ ಮುಖಂಡ ಕೆ.ಸಿ.ಗಿರೀಶ್ ಮಾತನಾಡಿ, ಪರ್ವಿಜ್ ಅಹಮದ್ ಅವರು ಅತ್ಯಂತ ಚಿಕ್ಕ ವಯಸ್ಸಿಗೆ ಗ್ರಾಪಂ ಸದಸ್ಯರಾಗಿ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜತೆಗೆ ಸಾಮಾಜಿಕವಾಗಿ ಕಳಕಳಿ ಹೊಂದಿದ್ದು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಉಚಿತವಾಗಿ ನೋಟ್‌ಬುಕ್, ಪಠ್ಯ ಸಲಕರಣೆಗಳನ್ನು ನೀಡುವುದು, ಕೊಪ್ಪ ಗ್ರಾಮದಲ್ಲಿ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಗಣೇಶನ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ ಎಂದರು.

ಕೋವಿಡ್ ಸಂದರ್ಭದಲ್ಲೂ ಗ್ರಾಮಸ್ಥರಿಗೆ ಮಾಸ್ಕ್ ವಿತರಣೆ, ಆಹಾರ ವಿತರಣೆ ಹಾಗೂ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಿದ್ದಾರೆ. ಇದೇ ರೀತಿಯ ಇನ್ನು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪರ್ವಿಜ್ ಅಹಮದ್ ಮಾಡಲಿ ಎಂದು ಆಶಿಸಿದರು. ಶಿಕ್ಷಕರು ಬಿ.ಕೆ.ಗೌರಮ್ಮ, ಎಂ.ಸಿ.ವಿದ್ಯಾಶ್ರೀ, ವೈ.ವಿ.ವಿಜಯಲಕ್ಷ್ಮೀ, ದೊಡ್ಡತಮ್ಮಯ್ಯ, ಮುಖಂಡರಾದ ಹನೀಫ್ ಅಹಮದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net