ಪ್ರತಿಯೊಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ

ಪ್ರತಿಯೊಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ
Published on

ಹನೂರು: ಪ್ರತಿಯೊಬ್ಬರೂ ಪಕ್ಷ ಸಂಘಟನೆ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದರ ಜತೆಗೆ ಕಷ್ಟದಲ್ಲಿದ್ದವರಿಗೆ ಸಾಮಾಜಿಕ ಸೇವೆಯನ್ನು ಒದಗಿಸಬೇಕು. ಇದರಿಂದ ಪಕ್ಷಕ್ಕೆ ಉತ್ತಮ ಹೆಸರು ಬರುತ್ತದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ಸಂಬಂಧ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ವಿವಿಧ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಸಮರ್ಪಕವಾಗಿ ಪಕ್ಷ ಸಂಘಟನೆ ಆಗುತ್ತಿರಲಿಲ್ಲ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಳೆದ ವಾರ ನಡೆದ ಸಭೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ಲಾಕ್‌ಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ರೈತ, ಮಹಿಳಾ, ಬೀದಿ ಬದಿ ವ್ಯಾಪಾರಿ, ಕಾರ್ಮಿಕರು, ಚಾಲಕರು, ಅಸಂಘಟಿತ ವಲಯ, ಕಾನೂನು ಘಟಕ ಸೇರಿದಂತೆ ಇನ್ನಿತರ ಒಟ್ಟು 13 ಘಟಕಗಳನ್ನು ರಚಿಸಿ ಕಾರ್ಯಕರ್ತರಿಗೆ ಬಲ ನೀಡುವುದರ ಜತೆಗೆ ಪಕ್ಷವನ್ನು ಸಂಘಟಿಸುವಂತೆ ಸೂಚನೆ ನೀಡಿದ್ದರು. ಅದರಂತೆಯೇ ಘಟಕಗಳನ್ನು ರಚಿಸಲು ಮುಂದಾಗಿದ್ದು, ಪ್ರತಿ ಘಟಕಕ್ಕೂ ಆಯಾ ಬೂತ್ ಮಟ್ಟದಲ್ಲಿ ಆಸಕ್ತಿಯುಳ್ಳ ಐವರು ಸದಸ್ಯರನ್ನು ನೇಮಕ ಮಾಡಬೇಕು. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ವಂಚಿತರಾದವರಿಗೆ ಈ ಯೋಜನೆಯನ್ನು ತಲುಪಿಸಲು ಶ್ರಮಿಸಬೇಕು. ಜತೆಗೆ ಕಷ್ಟದಲ್ಲಿದ್ದವರಿಗೆ ಪಕ್ಷ ಭೇದ ಮರೆತು ಸಹಾಯ ಹಸ್ತವನ್ನು ನೀಡಬೇಕು. ಇದರಿಂದ ಜನರಿಗೆ ಪಕ್ಷದ ಬಗ್ಗೆ ಗೌರವ ಮೂಡುತ್ತದೆ ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರ ಇದೀಗ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲಾಗುತ್ತಿದೆ. ಆದ್ದರಿಂದ ಆಯಾ ಡೇರಿಯಲ್ಲಿ ಆಸಕ್ತಿಯುಳ್ಳವರು ಹೆಸರನ್ನು ನೋಂದಾಯಿಸಿ. ಇದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಹಕಾರಿಯಾಗಿದೆ. ಇನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗುಂಪುಗಾರಿಕೆಯೊಂದಿಗೆ ರಾಜಕೀಯ ನಡೆಯುತ್ತಿದೆ. ಇದರಿಂದ ಜನತೆಗೆ ಅನ್ಯಾಯವಾಗುತ್ತಿದೆ. ಆದರೆ, ಪಕ್ಷದ ಕಾರ್ಯಕರ್ತರು ಸುಮ್ಮನಿರುವುದೇಕೆ ? ಎಂದು ಪ್ರಶ್ನಿಸಿದರು.

ದೂರದೃಷ್ಟಿ ಇರಬೇಕು: ಕ್ಷೇತ್ರ ವ್ಯಾಪ್ತಿಯಲ್ಲಿ ನಾಯಕ ಹಾಗೂ ಗಿರಿಜನ ಸಮುದಾಯವು 44 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ನನ್ನ ಅಧಿಕಾರದ ಅವಧಿಯಲ್ಲಿ ಪಾಳ್ಯ ಹಾಗೂ ರಾಮಾಪುರದಲ್ಲಿ ತಲಾ 17.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಯನ್ನು ತೆರೆದು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಹಾಲಿ ಶಾಸಕರು ಬಂಡಳ್ಳಿಗೆ ಮಂಜೂರಾಗಿದ್ದ ವಿದ್ಯಾರ್ಥಿ ನಿಲಯವನ್ನು ಹನೂರಿಗೆ ಸ್ಥಳಾಂತರಿಸಲು ನಿರ್ಧರಿಸಿರುವುದು ಎಷ್ಟರ ಮಟ್ಟಿಗೆ ಸರಿ? ಎಲ್ಲ ಮಕ್ಕಳಿಗೆ ಅನುಕೂಲವಾಗಲು ತಾಲೂಕು ಕೇಂದ್ರದಲ್ಲಿ ಹಾಸ್ಟೆಲ್ ತೆರೆಯಬೇಕಾದರೆ ಸುಮಾರು 20 ಕೋಟಿ ರೂ. ಅನುದಾನ ಅಗತ್ಯವಿದೆ. ಆದರೆ 4 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಾಗಿರುವುದು ಸಮುದಾಯದ ಮಕ್ಕಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಶಾಸಕರಾದವರು ದೂರದೃಷ್ಟಿಯನ್ನು ಹೊಂದಬೇಕು ಎಂದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ರಾಚಯ್ಯ, ಜಿಲ್ಲಾ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಾದೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net