

ತಿ.ನರಸೀಪುರ: ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿ, ದುಃಖಕ್ಕೆ ಆಸೆಯೇ ಮೂಲವೆಂದು ನುಡಿದಂತಹ ಗೌತಮ ಬುದ್ಧ ಜ್ಞಾನದ ಬೆಳಕು. ಬುದ್ಧ ಧಮ್ಮ ವೈಚಾರಿಕತೆ ಮತ್ತು ವೈಜ್ಞಾನಿಕ ವಿಚಾರಗಳನ್ನ ಹೊಂದಿದ್ದು, ಗೌತಮ ಬುದ್ಧನ ಪಂಚಶೀಲ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ವರುಣ ವಿಧಾನಸಭಾ ಕ್ಷೇತ್ರದ ಕೂಡ್ಲೂರು ಗ್ರಾಮದ ಬಳಿ ಇರುವ ನಳಂದ ಬುದ್ಧ ವಿಹಾರದಲ್ಲಿ ಸೋಮವಾರ ಗೌತಮಬುದ್ಧ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2569ನೇ ಬುದ್ಧ ಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡಿದ ಅವರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಬೌದ್ಧ ಧಮ್ಮ ಭಾರತದ ಮೂಲ ಧರ್ಮವಾಗಿದ್ದು, ಜಗತ್ತಿನಾದ್ಯಂತ ನಾನಾ ರಾಷ್ಟ್ರಗಳಲ್ಲಿ ಬಲವಾಗಿ ಬೆಳೆದಿದೆ ಎಂದರು.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಪ್ರಜಾಪ್ರಭುತ್ವದ ಧ್ಯೇಯವನ್ನು ಹೊಂದಿರುವ ಬುದ್ಧ ಧಮ್ಮ ತನ್ನ ತತ್ವ ಸಿದ್ಧಾಂತಗಳಿಂದ ದೇಶಗಳಲ್ಲಿ ವಿಸ್ತರಣೆಯಾಗಿದೆ. ಅಂಬೇಡ್ಕರ್ ಅವರು ನಾಗಪುರದಲ್ಲಿ ಲಕ್ಷಾಂತರ ಅನಿಯಾಯಿಗಳೊಂದಿಗೆ ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದರಿಂದ ದೇಶದಲ್ಲಿ ಪುನರುತ್ಥಾನಗೊಂಡಿತ್ತು. ಭಾರತೀಯರಾಗಿ, ಬೌದ್ಧ ಧಮ್ಮದ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌತಮ ಬುದ್ಧ ಮತ್ತು ಅಂಬೇಡ್ಕರ್ ಅವರನ್ನು ಗೌರವಿಸಬೇಕು. ನಳಂದ ಬುದ್ಧ ವಿಹಾರದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಭಾಗದ ಜನಪ್ರತಿನಿಧಿಯಾಗಿ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ. ವಿಹಾರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ಕಲ್ಪಿಸಿಕೊಡುತ್ತೇನೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.
ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಯುವ ಜನತೆ ಹಾಗೂ ಮಧ್ಯ ವಯಸ್ಸಿನ ಜನರಲ್ಲಿ ಬೌದ್ಧ ಧಮ್ಮದ ಸಿದ್ಧಾಂತ ಹಾಗೂ ಚಿಂತನೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಧಮ್ಮವನ್ನು ವಿಸ್ತರಿಸುವ ಕಾರ್ಯವಾಗಬೇಕು. ಬುದ್ಧ ವಿಹಾರಗಳಲ್ಲಿ ಧ್ಯಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಎಲ್ಲ ಜನ ಸಮುದಾಯಗಳು ಪಾಲ್ಗೊಳ್ಳಬೇಕು. ಬೌದ್ಧ ಧಮ್ಮದ ವಿಚಾರಗಳು ಪ್ರತಿಯೊಬ್ಬರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರಿಂದ ಬುದ್ಧನೆಡೆಗೆ ಎಲ್ಲರನ್ನೂ ಕರೆತರಬೇಕು ಎಂದು ಸಲಹೆ ನೀಡಿದರು.
ಬಿಎಸ್ಪಿ ಉಸ್ತುವಾರಿ ನಾಯಕ ಗಂಗಾಧರ್ ಬಹುಜನ್ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್. ಎನ್.ಸಿದ್ಧಾರ್ಥ, ಮಾಜಿ ಸದಸ್ಯ ಕೆ.ಮಹದೇವ, ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಉಪಾಧ್ಯಕ್ಷ ಸೊಸಲೇ ಮಹದೇವಸ್ವಾಮಿ, ಖಜಾಂಚಿ ಎಂ.ಕೆ.ಸಿದ್ದರಾಜು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ನಿಂಗರಾಜು, ಕಸಬಾ ಪ್ಯಾಕ್ಸ್ ಅಧ್ಯಕ್ಷ ಮಲ್ಲಣ್ಣ, ಜನ ಸೇವಾ ಟ್ರಸ್ಟ್ ಅಧ್ಯಕ್ಷೆ ಕೋಮಲಾಕ್ಷಿ, ಗೌತಮ ಬುದ್ಧ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್. ಪುಟ್ಟಸ್ವಾಮಿ, ಉಪಾಧ್ಯಕ್ಷ ಶಿವಣ್ಣ, ಖಜಾಂಚಿ ಮಹದೇವಯ್ಯ(ಸೀನಪ್ಪ), ಸ. ಕಾರ್ಯದರ್ಶಿ ಎನ್.ಲಿಂಗಪ್ಪಾಜಿ, ಟ್ರಸ್ಟಿಗಳಾದ ಪುಟ್ಟರಾಜು, ಮರಿಮಹದೇವಯ್ಯ(ಅರ್ಜುನ್), ತಾ.ಪಂ ಮಾಜಿ ಉಪಾಧ್ಯಕ್ಷ ಪ್ರಸನ್ನ, ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್.ಮಹೇಶ, ಮುಖಂಡರಾದ ಕನ್ನಹಳ್ಳಿ ಲಕ್ಷ್ಮಣ, ಶಿವಕುಮಾರ್, ಬಿ. ಮಹದೇವಸ್ವಾಮಿ, ಸೋಮೇಶ, ಪುಟ್ಟಮರುಡಯ್ಯ, ಅಂಕನಹಳ್ಳಿ ಪುಟ್ಟರಾಜು, ಆನಂದ್, ಲಿಂಗರಾಜು, ಎಸ್. ನಂಜುಂಡಯ್ಯ ಹಾಗೂ ಇತರರು ಇದ್ದರು.