

ನುಗ್ಗೇಹಳ್ಳಿ: ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆಯ ಕಡೆ ಚಿಂತನೆ ಹರಿಸಬೇಕು ಎಂದು ಅರಸಿಕೆರೆ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಹೋಬಳಿಯ ದೇವಲಾಪುರ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ದಿ.ಗಿರಿಗೌಡ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಆಶೀರ್ವಚನ ನೀಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ಉಜ್ವಲ ಭವಿಷ್ಯದ ಕಡೆ ಚಿಂತನೆ ಹರಿಸಬೇಕು. ಇದಕ್ಕೆ ಧರ್ಮಪ್ರಜ್ಞೆ ಅವಶ್ಯಕವಾಗಿದೆ ಎಂದರು.
ದೇವರು ಮತ್ತು ಧರ್ಮದಲ್ಲಿ ನಂಬಿಕೆ ಇರಿಸಿ ದೇಹ ಮತ್ತು ಮನಸ್ಸುಗಳನ್ನು ಭಗವಂತನಿಗೆ ಅರ್ಪಣೆ ಮಾಡಿಕೊಂಡಾಗ ಮಾತ್ರ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು.
ಸನಾತನ ಧರ್ಮ ಸಂಸ್ಕೃತಿ, ಕಲೆ, ಆಚಾರ, ವಿಚಾರಗಳಿಗೆ ಬದ್ಧರಾಗಿದ್ದುಕೊಂಡು ಬದುಕುವುದು ಪ್ರಮುಖ ಧ್ಯೇಯವಾಗಬೇಕು. ಗುರುಗಳ ಸಮ್ಮುಖದಲ್ಲಿ ಉದಾತ್ತ ಚಿಂತನೆ ಮೈಗೂಡಿಸಿಕೊಳ್ಳಬೇಕು. ಗಿರಿ ಗೌಡರು ಈ ಭಾಗದ ರೈತರ ಮಕ್ಕಳಿಗೆ ವಿದ್ಯಾದಾನ ನೀಡಿ ಉಜ್ವಲ ಭವಿಷ್ಯ ರೂಪಿಸಲು ಕಾರಣಕರ್ತರಾಗಿದ್ದಾರೆ ಎಂದರು.
ಕಲ್ಲಿನಾಥ ಶಾಸ್ತ್ರಿಗಳು ಮಾತನಾಡಿ, ಗಿರಿಗೌಡರಿಂದ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದ ಅನೇಕರು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕತ್ರಿಘಟ್ಟದ ಮೇಳೆಯಮ್ಮ ಆಧ್ಯಾತ್ಮಿಕ ಕ್ಷೇತ್ರದ ಶ್ರೀ ಚಂದ್ರಶೇಖರ ಗುರೂಜಿ, ಪ್ರಮುಖರಾದ ಅಂಬಿಕಾ ರಾಮಕೃಷ್ಣ, ಟಿಎಪಿಎಂಎಸ್ ಅಧ್ಯಕ್ಷ ಕೆ.ಎಂ. ನಂಜಪ್ಪ, ಡಾಕ್ಟರ್ ನಂಜುಂಡೇಗೌಡ, ಕಿಶೋರ್, ರಾಜಶೇಖರ್, ಅಮೋಘ, ದೀಪು, ನಾಗೇಶ್, ಇತರರು ಇದ್ದರು.