

ಚನ್ನರಾಯಪಟ್ಟಣ: ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಾ ಕುಮಾರಿ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಲಯನ್ಸ್ ಕ್ಲಬ್ ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ಕ್ಷಯ ರೋಗ ನಿರ್ಮೂಲನೆ ಬಗ್ಗೆ ಬುಧವಾರ ಆಯೋಜಿಸಿದ್ದ ಆರೋಗ್ಯದ ಬಗ್ಗೆ ಇರಲಿ ಗಮನ ಕ್ಷಯ ಮುಕ್ತ ಭಾರತ ಅಭಿಯಾನ 100 ದಿನಗಳ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯ ರೋಗಿಗಳನ್ನು ಪತ್ತೆ ಹಚ್ಚುವ ಕೆಲಸ ಚುರುಕಾಗಬೇಕು. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಆಗಿರುವುದರಿಂದ ಇದಕ್ಕೆ ಚಿಕಿತ್ಸೆ ನೀಡಿ ಹರಡದಂತೆ ನೋಡಿಕೊಳ್ಳಬೇಕು. ಕ್ಷಯ ರೋಗದ ಬಗ್ಗೆ ನಿರ್ಲಕ್ಷೃ ವಹಿಸುವುದು ಸೂಕ್ತವಲ್ಲ. ಸಕಾಲಕ್ಕೆ ಔಷಧಿ ಮಾತ್ರೆ ಪಡೆದುಕೊಂಡರೆ ರೋಗ ಬರದಂತೆ ತಡೆಗಟ್ಟಬಹುದು. ಆದ್ದರಿಂದ ಪ್ರತಿಯೊಬ್ಬರು ಎಚ್ಚರಿಕೆ ಹಾಗೂ ಮುಂಜಾಗ್ರತೆಯಿಂದ ಇರಬೇಕು ಎಂದರು.
ಸರ್ವರಿಗೂ ನ್ಯಾಯ ಎಂಬ ಧ್ಯೇಯೋದ್ದೇಶದೊಂದಿಗೆ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಇದೀಗ ಬಡವರು, ಕಾನೂನು ಅರಿವಿಲ್ಲದವರು, ಅಸಂಘಟಿತ ಕಾರ್ಮಿಕರು, ಹಿರಿಯ ನಾಗರಿಕರಿಗೆ ತನ್ನ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುತ್ತಿದೆ. ಬಡವರಿಗೆ, ಅಶಕ್ತರಿಗೆ ಕಾನೂನು ನೆರವು ನೀಡಲು, ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಕಾನೂನುಗಳ ಅರಿವು ಮೂಡಿಸಲು ಹಾಗೂ ಲೋಕ ಅದಾಲತ್‌ಗಳ ಮೂಲಕ ವ್ಯಾಜ್ಯಗಳನ್ನು ಕಡಿಮೆಗೊಳಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಕಾನೂನು ಸೇವೆ ಕಾಯ್ದೆಯನ್ನು ಜಾರಿ ಮಾಡಿದೆ ಎಂದು ವಿವರಿಸಿದರು.
ಕಾನೂನು ಸೇವಾ ಪ್ರಾಧಿಕಾರಗಳು ರಾಷ್ಟ್ರಮಟ್ಟದಿಂದ ಹಿಡಿದು ತಾಲೂಕು ಹಂತದವರೆಗೆ ತನ್ನ ಕಾರ್ಯ ವ್ಯಾಪ್ತಿ ಹೊಂದಿದ್ದು, ಎಲ್ಲ ಹಂತಗಳಲ್ಲಿಯೂ ಉಚಿತವಾಗಿ ಸೇವೆ ನೀಡುತ್ತಿದೆ. ಸುಪ್ರೀಂಕೋರ್ಟ್ ಹಂತದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದ್ದರೆ, ರಾಜ್ಯ ಮಟ್ಟದಲ್ಲಿ ಹೈಕೋರ್ಟ್ ಕಾನೂನು ಸೇವಾ ಸಮಿತಿಗಳು, ಜಿಲ್ಲಾ ಕಾನೂನು ಸೇವಾ ಸಮಿತಿಗಳು, ತಾಲೂಕು ಕಾನೂನು ಸೇವಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ. ವಾರ್ಷಿಕ 3ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುವ ಯಾವುದೇ ವ್ಯಕ್ತಿ ಉಚಿತವಾಗಿ ಕಾನೂನು ಸೇವೆ ಪಡೆದುಕೊಳ್ಳಬಹುದಾಗಿದೆ. ಮಹಿಳೆಯರಿಗೆ ಈ ನಿಮಯ ಅನ್ವಯಿಸುವುದಿಲ್ಲ. ಹೀಗಾಗಿ, ಕಾನೂನು ಸಮಸ್ಯೆಯಿಂದ ಬಳಲುತ್ತಿರುವ ಯಾವುದೇ ವ್ಯಕ್ತಿ ತನ್ನ ಹಕ್ಕು ಸ್ಥಾಪನೆಗಾಗಿ ಕಾನೂನು ಸೇವಾ ಸಮಿತಿ ಸಂಪರ್ಕಿಸಬಹುದಾಗಿದೆ. ಅವರಿಗೆ ತಾಲೂಕು ಹಂತದಿಂದ ಸುಪ್ರೀಂಕೋರ್ಟ್‌ವರೆಗೆ ಉಚಿತ ಕಾನೂನು ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿ.ಮಹೇಶ್ ಮಾತನಾಡಿ, ರಾಜ್ಯದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು 100 ದಿನದ ಅಭಿಯಾನಕ್ಕೆ ಕರ್ನಾಟಕ ಸರ್ಕಾರವು ರಾಷ್ಟ್ರೀಯ ಟಿಬಿ ನಿರ್ಮೂಲನೆ ಕಾರ್ಯಕ್ರಮದಡಿ (ಎನ್‌ಟಿಇಪಿ) ಆಯೋಜಿಸಲಾಗಿರುವ ಅಭಿಯಾನದಲ್ಲಿ ಕ್ಷಯ ರೋಗ (ಟಿಬಿ) ಸಂಬಂಧಿತ ಮರಣವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.
2025ರ ವೇಳೆಗೆ ’ಟಿಬಿ-ಮುಕ್ತ ಭಾರತ’ವನ್ನಾಗಿಲು ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಅಪಾಯದ ವ್ಯಕ್ತಿಗಳನ್ನು ಗುರುತಿಸುವುದು, ಸಮಗ್ರ ಆರೈಕೆಯನ್ನು ಒದಗಿಸುವುದು, ಸಕ್ರಿಯ ಟಿಬಿಯ ಹೆಚ್ಚಿನ ಅಪಾಯವನ್ನು ಹೊಂದಿರುವ ವ್ಯಕ್ತಿಗಳಿಗೆ ‘ಟಿಬಿ ಪ್ರಿವೆಂಟಿವ್ ಥೆರಪಿ’ (ಟಿಪಿಟಿ) ಒದಗಿಸಲು ಅಭಿಯಾನವು ಆದ್ಯತೆ ನೀಡುತ್ತದೆ. ಇದರಿಂದ ಹೊಸ ಪ್ರಕರಣಗಳನ್ನು ತಡೆಗಟ್ಟಲು ಸಹಾಯಕವಾಗಲಿದೆ. ರೋಗಲಕ್ಷಣ ಇರುವ ್ಯಕ್ತಿಗಳಿರುವ ಮನೆಗಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳು ಮತ್ತು ಕೊಳೆಗೇರಿ ಪ್ರದೇಶಗಳು ತಪಾಸಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಕ್ಷಯ ರೋಗ ಮುಕ್ತ ತಾಲೂಕು ಮಾಡಲು ಎಲ್ಲ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ, ಮೂರು ನಾಲ್ಕು ವಾರಗಳಿಗೂ ಹೆಚ್ಚು ಕೆಮ್ಮು ಇದ್ದರೆ ಅದು ಕ್ಷಯ ಆಗಿರಬಹುದು ಆದ್ದರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು, ಕ್ಷಯ ರೋಗಕ್ಕೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪರೀಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಹೆಚ್ಚಿನ ರೀತಿ ಕಾರ್ಯ ನಿರ್ವಹಿಸಬೇಕು. ನಿಕ್ಷಯ ಪೋರ್ಟಲ್ ನಲ್ಲಿ ಕ್ಷಯ ರೋಗಿಗಳನ್ನು ದತ್ತು ಪಡೆಯಲು ಅವಕಾಶ ಇದೆ. ಈ ರೋಗಿಗಳ ಔಷಧಿಗಳನ್ನು ನೀಡಲು ಕಡಿಮೆ ಮೊತ್ತದ ಹಣವನ್ನು ಒದಗಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಎಸ್ ಟಿಎಲ್‌ಎಸ್ ಅಧಿಕಾರಿ ತಿಮ್ಮಯ್ಯ ಕ್ಷಯರೋಗದ ಬಗ್ಗೆ ಮಾಹಿತಿ ಒದಗಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಂದರ್ ರಾಜ್ ಕಾರ್ಯದರ್ಶಿ ಎ.ಡಿ.ಕುಮಾರ್, ಡಾ.ಅರುಣ್, ಡಾ.ಹರಿಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.