

ತಾವರಗೇರಾ: ಸೋಲು ಗೆಲುವು ಮುಖ್ಯವಲ್ಲ , ಸ್ಪರ್ಧಿಸುವುದು ಮುಖ್ಯ ಎಂಬುದನ್ನು ಅರಿತು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಶಶಿಧರಸ್ವಾಮಿ ಸಂಯುಕ್ತ ಪಿಯು ಕಾಲೇಜಿನ ಅಧ್ಯಕ್ಷ ಶೇಖರಗೌಡ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಶಶಿಧರಸ್ವಾಮಿ ಸಂಯುಕ್ತ ಪಿಯು ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಇಲ್ಲದ ಜೀವನ ಕೀಟ ತಿಂದಹಾಗೆ ಎಂದು ಗಾದೆ ಮಾತಿದೆ. ಜೀವನದಲ್ಲಿ ಕ್ರೀಡೆ ಇದ್ದರೆ ಮಾತ್ರ ಸದೃಢ ದೇಹ ಹೊಂದಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಆರೋಗ್ಯಕ್ಕೆ ಕ್ರೀಡಾಕೂಟ ಪೂರಕವಾಗಿದೆ ಎಂದರು.
ಇದನ್ನೂ ಓದಿ: ಪ್ರತಿಭೆ ಹೊರಹೊಮ್ಮಲು ಕ್ರೀಡಾಕೂಟ ವೇದಿಕೆ
ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ತಾವರಗೇರಾದ ಎಂಟು, ಮೆಣೇಧಾಳದ ಎರಡು, ಸಂಗನಾಳ , ಕಿಲಾರಹಟ್ಟಿ, ಲಿಂಗದಹಳ್ಳಿ ಗ್ರಾಮಗಳ ತಲಾ ಒಂದು ಒಟ್ಟು 13 ಪ್ರೌಢಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಾಲೇಜಿನ ಉಪಾಧ್ಯಕ್ಷ ಶರಣಪ್ಪ ಐಲಿ, ಕಾರ್ಯದರ್ಶಿ ಮಲ್ಲನಗೌಡ ಓಲಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಾಗಪ್ಪ ಬಿಳಿಯಪ್ಪನವರ, ಸಿಆರ್‌ಸಿ ಕಾಶೀನಾಥ ನಾಗಲೀಕರ, ಸಂಸ್ಥೆಯ ಖಜಾಂಚಿ ಪಂಪಂಣ್ಣ ಚಿಟ್ಟಿ , ನಿರ್ದೇಶಕರಾದ ಮಲ್ಲಿಕಾರ್ಜುನಗೌಡ, ಮುಖ್ಯಶಿಕ್ಷಕ ಪಂಪಾಪತಿ ಕೊರಲಿ, ಮಲ್ಲಪ್ಪ ಗಲಗಲಿ, ನಾಗರಾಜ, ರವಿ ಹಾನಗಲ್, ಜಗದೀಶ ಸೂಡಿ ಇತರರಿದ್ದರು.