ಪ್ರತಿಯೊಬ್ಬರಲ್ಲೂ ಖಿನ್ನತೆ ಇರುತ್ತದೆ

10 mlv 2
Published on

ಮಳವಳ್ಳಿ: ಮನಸ್ಸಿನ ಸ್ಥಿಮಿತ ಕಳೆದುಕೊಂಡು ಎಲ್ಲೆಂದರಲ್ಲಿ ಅಲೆಯುವವರನ್ನು ಮಾತ್ರ ಹುಚ್ಚರೆನ್ನುತ್ತೇವೆ. ಆದರೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಮಾನಸಿಕ ಖಿನ್ನತೆ ಇರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಮಾದೇಶ್ ಅಭಿಪ್ರಾಯಪಟ್ಟರು.


ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮಾನಸಿಕ ಅಸ್ವಸ್ಥತೆಯಿಂದ ಬಳಲುವುದು ಹಲವು ಹಂತದಲ್ಲಿರುತ್ತದೆ ಎಂದು ನನಗೆ ತರಬೇತಿಯ ಸಂದರ್ಭದಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞರೊಬ್ಬರು ಮಾಹಿತಿ ನೀಡಿದ್ದರು. ಬೀದಿಗಳಲ್ಲಿ ಬಟ್ಟೆ ಹರಿದುಕೊಂಡು ಓಡಾಡುವವರು ಕೊನೆಯ ಹಂತವಾಗಿರುತ್ತದೆ. ಆದರೆ ಪ್ರಸಕ್ತ ದಿನಮಾನಗಳ ಒತ್ತಡದ ಜೀವನಶೈಲಿಗೆ ಸಿಲುಕಿ ಕೆಲವರು ಬಳಲುತ್ತಿದ್ದರೆ, ಬಹಳಷ್ಟು ಜನರು ಮೊಬೈಲ್ ಗುಂಗಿಗೆ ಸಿಲುಕಿ ಅಸ್ವಸ್ಥತೆಗೊಳಗಾಗುತ್ತಿದ್ದಾರೆ ಎಂದರು.


ಮನಸ್ಸಿಗೆ ಹೆಚ್ಚು ಗೊಂದಲದ ವಿಷಯಗಳನ್ನು ಹಚ್ಚಿಕೊಳ್ಳದೆ ಪ್ರಶಾಂತತೆ ಹಾಗೂ ವಿಶಾಲ ಮನೋಭಾವವನ್ನು ರೂಢಿಸಿಕೊಂಡು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.


ಅಧ್ಯಕ್ಷತೆಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ವಹಿಸಿದ್ದರು.
ನ್ಯಾಯಾಧೀಶರಾದ ಸಚಿನ್ ಕುಮಾರ್ ಶಿವಪೂಜಿ, ಎಚ್.ಎಸ್.ಕಾವ್ಯಶ್ರೀ, ಸಹಾಯಕ ಸರ್ಕಾರಿ ಅಭಿಯೋಜಕ ರವಿಸೆಂತಿಲ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್, ವಕೀಲ ಶ್ರೀಕಂಠಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net