ಪ್ಲಾಸ್ಟಿಕ್‌ಮುಕ್ತ ಮ.ಬೆಟ್ಟಕ್ಕೆ ಎಲ್ಲರೂ ಸಹಕರಿಸಿ

15 HANUR 4
ತಾಳುಬೆಟ್ಟದಲ್ಲಿ ಮೈಸೂರು ಪರಿಸರ ವಾರಿಯರ್ಸ್‌ ಗ್ರೂಪ್ ವತಿಯಿಂದ ಪ್ಲಾಸ್ಟಿಕ್‌ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಲೋಕೇಶ್, ಮಂಜುನಾಥ್, ಅಮೋಘವರ್ಷ ಇತರರು ಇದ್ದರು.
Published on

ಹನೂರು: ಮಲೆಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮೈಸೂರು ಪರಿಸರ ವಾರಿಯರ್ಸ್‌ ಗ್ರೂಪ್ ಸ್ಥಾಪಕ ಮಂಜುನಾಥ್ ಮನವಿ ಮಾಡಿದರು.

ತಾಲೂಕಿನ ತಾಳುಬೆಟ್ಟದಲ್ಲಿ ಬುಧವಾರ ಮೈಸೂರು ಪರಿಸರ ವಾರಿಯರ್ಸ್‌, ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಪ್ಲಾಸ್ಟಿಕ್‌ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾದಪ್ಪನ ನೆಲೆಬೀಡಾದ ಮ.ಬೆಟ್ಟ ಧಾರ್ಮಿಕ ಪುಣ್ಯಕ್ಷೇತ್ರ. ಇಲ್ಲಿಗೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹಾಗಾಗಿ ಈ ಸ್ಥಳದಲ್ಲಿ ಧಾರ್ಮಿಕ ಪಾವಿತ್ರೃವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಆಗಮಿಸುವ ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ ಪರಿಸರ ಹಾಳಾಗಲು ಕಾರಣವಾಗಿರುವುದು ಒಂದೆಡೆಯಾದರೆ, ಈ ಭಾಗದಲ್ಲಿನ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮದಲ್ಲಿ ವನ್ಯಪ್ರಾಣಿಗಳ ಜೀವಕ್ಕೆ ಮಾರಕವಾಗಿ ಪರಿಣಮಿಸಲಿದೆ. ಅಲ್ಲದೆ, ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಬಿಡಬೇಕಿರುವುದು ಅನಿವಾರ್ಯ ಆಗಿದೆ. ಈ ದಿಸೆಯಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾವೇರಿ ವನ್ಯಜೀವಿ ವಿಭಾಗದ ಎಸಿಎಫ್ ಅಂಕರಾಜು ಮಾತನಾಡಿ, ಮ.ಬೆಟ್ಟಕ್ಕೆ ಆಗಮಿಸುವ ಅದರಲ್ಲೂ ಕಾಲ್ನಡಿಗೆಯ ಮೂಲಕ ಆಗಮಿಸುವ ಭಕ್ತರು ಅರಣ್ಯ ಪ್ರದೇಶ ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡುತ್ತಿದ್ದಾರೆ. ಇದರಿಂದ ಪರಿಸರ ಹಾನಿಯಾಗುವುದರ ಜತೆಗೆ ವನ್ಯಜೀವಿಗಳಿಗೂ ತೊಂದರೆಯಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಅರಣ್ಯ ಇಲಾಖೆ ವತಿಯಿಂದ ಭಕ್ತರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ ಭಕ್ತರು ಪಾಲನೆ ಮಾಡದಿರುವುದು ವಿಪರ್ಯಾಸ. ಆದ್ದರಿಂದ ಭಕ್ತರು ಇನ್ನಾದರೂ ಇತ್ತ ಗಮನಹರಿಸಿ ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿಸಲು ಸಹಕಾರ ನೀಡಬೇಕು. ಈ ದಿಸೆಯಲ್ಲಿ ಇಂತಹ ಅಭಿಯಾನವನ್ನು ಹಮ್ಮಿಕೊಂಡಿರುವುದು ಮೆಚ್ಚುಗೆಯ ಸಂಗತಿ ಎಂದು ತಿಳಿಸಿದರು.

ರಾಮಾಪುರ ಸಬ್ ಇನ್‌ಸ್ಪೆಕ್ಟರ್ ಲೋಕೇಶ್, ಪರಿಸರ ವಾರಿಯರ್ಸ್‌ ಗ್ರೂಪ್ ಸದಸ್ಯರಾದ ಚೇತನ್ ಬಂಡಳ್ಳಿ, ಅಮೋಘ ವರ್ಷ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net