

ವಿರಾಜಪೇಟೆ: ವಿಶ್ವ ಪರಿಸರ ದಿನ ಆಚರಣೆ ಪ್ರಯುಕ್ತ ಆರ್ಜಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಶ್ರೀ ಶನೀಶ್ವರ ಭಕ್ತ ಜನ ಮಂಡಳಿ ಮತ್ತು ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡಲಾಯಿತು.
ಸಾಮಾಜಿಕ ಕಾರ್ಯಕರ್ತ ಮೇರಿಯಂಡ ಸಂಕೇತ್ ಪೂವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೂನ್ 5ರಂದು ಒಂದು ದಿನ ಮಾತ್ರ ಸಸಿ ನೆಟ್ಟು ಪರಿಸರದ ಬಗ್ಗೆ ಮಾತನಾಡಿದರೆ ಸಾಲದು, ಪರಿಸರದ ಕಾಳಜಿ ನಿರಂತರವಾಗಿರಬೇಕು ಎಂದರು.
ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅರಣ್ಯಗಳಲ್ಲಿ ಒಂದು ದಿನ ತರಬೇತಿ ಕಾರ್ಯಾಗಾರಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬರಲು ಅರಣ್ಯ ನಾಶವೇ ಪ್ರಮುಖಕಾರಣ. ಹೆಚ್ಚು-ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವಂತಾಗಬೇಕು ಎಂದರು.
ಅರಣ್ಯ ಉಪವಲಯ ಅಧಿಕಾರಿ ಮಧುಕುಮಾರ್ ಪರಿಸರದ ಮಹತ್ವ ಕಾಪಾಡಲು ಸರ್ಕಾರದ ಮಟ್ಟದಲ್ಲಿ ಇರುವ ಯೋಜನೆಗಳ ಬಗ್ಗೆ ತಿಳಿಸಿದರು.
ಚಿತ್ರ ಕಲಾವಿದ ಬಿ.ಆರ್.ಸತೀಶ್ ಪರಿಸರದ ಕುರಿತು ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು. ಸಾಮಾಜಿಕ ಕಾರ್ಯಕರ್ತ ಹಾಗೂ ಆಟೋ ಚಾಲಕ ಜುನೈದ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಮಮತಾ, ಸಾಮಾಜಿಕ ಕಾರ್ಯಕರ್ತ ಬಾಬಾಶಂಕರ್, ಮಾಜಿ ಸೈನಿಕ ಅಬ್ದುಲ್ ಸಲಂ, ಶ್ರೀ ಶನೀಶ್ವರ ಭಕ್ತ ಜನ ಮಂಡಳಿಯ ಸದಸ್ಯ ಕೋಮಲಾ, ಯುವರಾಜ್ ಕೃಷ್ಣ ಇತರರು ಇದ್ದರು.