

ಹನೂರು: ಪ್ರತಿ ಕುಟುಂಬವೂ ಶೌಚಗೃಹವನ್ನು ಹೊಂದುವುದರ ಮೂಲಕ ಗ್ರಾಮ ಪಂಚಾಯಿತಿಯನ್ನು ಬಹಿರ್ದೆಸೆ ಮುಕ್ತವಾಗಿಸಬೇಕು ಎಂದು ತಾಲೂಕು ಪಂಚಾಯಿತಿ ಇಒ ಉಮೇಶ್ ತಿಳಿಸಿದರು.
ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಮಂಗಳವಾರ ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಮ್ಮ ಶೌಚಗೃಹ, ನಮ್ಮ ಗೌರವ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ವ್ಯಕ್ತಿಯ ಜೀವನದಲ್ಲಿ ಆರೋಗ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆರೋಗ್ಯ ಸದೃಢವಾಗಿದ್ದರೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು. ಅಲ್ಲದೆ ನಿರ್ದಿಷ್ಟ ಗುರಿಯನ್ನು ಸಾಧಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಬೇಕು. ಈ ದೆಸೆಯಲ್ಲಿ ವೈಯಕ್ತಿಕ ಸ್ವಚ್ಛತೆಯ ಕಡೆ ಗಮನಹರಿಸುವುದರ ಮೂಲಕ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ಶೌಚಗೃಹವನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಬಹಿರ್ದೆಸೆಯನ್ನು ಅವಲಂಬಿಸಬಾರದು. ಶೌಚಗೃಹ ನಿರ್ಮಾಣಕ್ಕಾಗಿ ಸರ್ಕಾರ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಆದ್ದರಿಂದ ಜನರು ಇದರ ಪ್ರಯೋಜನ ಪಡೆದುಕೊಂಡು ಶೌಚಗೃಹವನ್ನು ನಿರ್ಮಿಸಿಕೊಳ್ಳಬೇಕು. ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೆಲವರು ಶೌಚಗೃಹವನ್ನು ಹೊಂದಿದ್ದರೂ ಬಳಸದಿರುವುದು ನಿಜಕ್ಕೂ ವಿಪರ್ಯಾಸ. ಇದರಿಂದ ಗ್ರಾಮದ ನೈರ್ಮಲ್ಯ ಹದಗೆಡುವುದರ ಜತೆಗೆ ಸಾಂಕ್ರಾಮಿಕ ರೋಗ ಹರಡುತ್ತವೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಶೌಚಗೃಹವನ್ನು ಬಳಕೆ ಮಾಡುವುದರ ಮೂಲಕ ಗ್ರಾಮದ ನೈರ್ಮಲ್ಯಕ್ಕೆ ಗ್ರಾಪಂನೊಂದಿಗೆ ಸಹಕಾರ ನೀಡಬೇಕು. ಡಿ.10ರವರೆಗೆ ನಡೆಯುವ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಕೆಲವರಿಗೆ ಶೌಚಗೃಹ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಲಾಯಿತು. ಬಳಿಕ ಶಾಲಾ ಮಕ್ಕಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದರ ಮೂಲಕ ಶೌಚಗೃಹದ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷೆ ರಾಧಾ, ಪಿಡಿಒ ರಮೇಶ್, ಮುಖ್ಯ ಶಿಕ್ಷಕ ರಾಜು, ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಶಿಕ್ಷಕರು ಇದ್ದರು.