ಎವರೆಸ್ಟ್ ಏರಲಿದ್ದಾಳೆ ಉತ್ತರ ಕನ್ನಡದ ಪೋರಿ

evarest
Published on

ಕಾರವಾರ: ಜೊಯಿಡಾ ತಾಲೂಕಿನ ಕಾರ್ಟೋಳಿಯ ಸೋನಾಲಿ ವೇಳೀಪ ಎಂಬುವವರು ಎವರೆಸ್ಟ್ ಶಿಖರವೇರುವ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಆಕೆಯದು.
ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿರುವ ಆಕೆ ಜವಾಹರ್ ಇನ್ಸ್ಟ್ಯೂಟ್ ಆಫ್ ಮೌಟೇನಿಯರಿಂಗ್‌ನಿಂದ ನಡೆಯುವ ವಿಂಟರ್ ಕೋರ್ಸ್ಗೆ ಆಯ್ಕೆಯಾಗಿದ್ದಳು. ಅದರಲ್ಲಿ 5,393 ಮೀಟರ್ ಎತ್ತರದ ಮಚೊಯಿ ಹಿಮ ಪರ್ವತವನ್ನು ಯಶಸ್ವಿಯಾಗಿ ಹತ್ತಿ ಅತ್ಯುತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದಳು.
ಶುಕ್ರವಾರ ಬೆಳಗ್ಗೆ ಆಕೆ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪುವ ಮೂಲಕ ಸಾಧನೆ ಮಾಡಿ ಮುಂದಿನ ಹಂತಕ್ಕೆ ಆಯ್ಕೆಯಾದಳು. ಮುಂದೆ 8,848 ಮೀಟರ್ ಎತ್ತರದ ಎವರೆಸ್ಟ್ ಶಿಖರ ಏರಬೇಕಿದೆ. ಈ ತಂಡದಲ್ಲಿ ಕರ್ನಾಟಕದ ಒಟ್ಟು ಐವರು ಶಿಬಿರಾರ್ಥಿಗಳು ಆಯ್ಕೆಯಾಗಿದ್ದಾಳೆ.

ಆಕೆ ಕಾರ್ಟೋಳಿ ಸಮೀಪದ ಸಿದ್ದ ಗುಡ್ಡದ ಬಾಲಕಿಯಾಗಿದ್ದಾಳೆ. ಸಿದ್ದ ಗುಡ್ಡ ಉತ್ತರ ಕನ್ನಡ ಜಿಲ್ಲೆಯ ಅತಿ ಎತ್ತರದ ಪ್ರದೇಶವಾಗಿದೆ. ಜಿಲ್ಲೆಯ ಎತ್ತರದ ಶಿಖರದಿಂದ ವಿಶ್ವದ ಎತ್ತರದ ಶಿಖರವೇರಲು ಹೊರಟಿರುವುದು ಸಂತಸದ ವಿಷಯ ಎಂದು ಜೊಯಿಡಾದ ಜಯಾನಂದ ಡೇರೆಕರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net