ಭೂಮಿಪೂಜೆಯಾದರೂ ಆರಂಭಗೊಳ್ಳದ ರಸ್ತೆ ಕಾಮಗಾರಿ

KAMPLI ROAD
ಮಳೆನೀರಿನಿಂದ ರಜ್ಜುಗೊಜ್ಜಲಾದ ಕಂಪ್ಲಿ ತಾಲೂಕಿನ ಆರ್.ಕೊಂಡಯ್ಯಕ್ಯಾಂಪಿನಿಂದ ನಂ.2ಮುದ್ದಾಪುರಕ್ಕೆ ಸಾಗುವ ರಸ್ತೆ.
Published on

ಕಂಪ್ಲಿ: ದಾರಿ ಯಾವುದಯ್ಯ ಆರ್.ಕೊಂಡಯ್ಯ ಕ್ಯಾಂಪಿಗೆ ಎನ್ನುವಂತಾಗಿದೆ ರಸ್ತೆ ದುಃಸ್ಥಿತಿ. ಸಣಾಪುರ ಗ್ರಾಪಂ ವ್ಯಾಪ್ತಿಗೆ ಸೇರಿದ ಒಳ ಗ್ರಾಮವಾದ ಕೊಂಡಯ್ಯ ಕ್ಯಾಂಪಿನತ್ತ ಹೊರಡುವ ರಸ್ತೆಗಳೆಲ್ಲ ಮಳೆಯಿಂದ ಕೆಸರು ಗದ್ದೆಯಂತಾಗಿದ್ದು, ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ.

ಆರ್.ಕೊಂಡಯ್ಯಕ್ಯಾಂಪ್‌ಗೆ ನಂ.2ಮುದ್ದಾಪುರ ಗ್ರಾಮದಿಂದ, ಶಂಕರ್‌ಸಿಂಗ್ ಕ್ಯಾಂಪ್‌ನಿಂದ ಕಾಲುವೆ ರಸ್ತೆ, ಸಣಾಪುರದಿಂದ ಕಡೆಅಂಚಿನ ಭೂಮಿಗೆ ನೀರೊದಗಿಸುವ ಕಾಲುವೆ ರಸ್ತೆ ಸಂಪರ್ಕ ಮಾರ್ಗಗಳಿವೆ. ಈ ಮೂರು ರಸ್ತೆಗಳು ಅಕ್ಷರಶಃ ಮಳೆ ನೀರಿನಿಂದ ರಜ್ಜುಗೊಜ್ಜಲಾಗಿದ್ದು ಪಾದಚಾರಿಗಳಿಗೂ, ದ್ವಿಚಕ್ರವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದ್ದು, ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ತೀರಾ ಕಷ್ಟ

2023ರ ಮಾರ್ಚ್‌ನಲ್ಲಿ ನಂ.2ಮುದ್ದಾಪುರ ಕೊಂಡಯ್ಯಕ್ಯಾಂಪಿಗೆ ಬರುವ ರಸ್ತೆ ಕಾಮಗಾರಿ ಭೂಮಿಪೂಜೆ ಮಾಡಲಾಗಿದ್ದು ಇನ್ನು ರಸ್ತೆ ಕಾಮಗಾರಿ ಆರಂಭಗೊಂಡಿಲ್ಲ. ಮಕ್ಕಳು ಶಾಲೆ ಕಾಲೇಜಿಗೆ ತೆರಳುವುದು, ಕೃಷಿ ಕೂಲಿಕಾರ್ಮಿಕರು ಹೊಲಗದ್ದೆಗಳಿಗೆ, ಕಿರಾಣಿ ಮತ್ತಿತರ ಪದಾರ್ಥ ತರಲು ಕ್ಯಾಂಪ್‌ನಿಂದ ತೆರಳುವುದು ತೀರಾ ಕಷ್ಟವಾಗಿದೆ.

ಹೆರಿಗೆ, ತುರ್ತು ಚಿಕಿತ್ಸೆಗೆ ಆಂಬ್ಯುಲೆನ್ಸ್ ಬರದಷ್ಟು ದಾರಿ ಹದಗೆಟ್ಟಿದೆ. ಕ್ಯಾಂಪಿನಿಂದ ಸಾಗುವ ಮೂರು ರಸ್ತೆಗಳ ಅಭಿವೃದ್ಧಿಯಾಗಬೇಕು ಎಂದು ಗ್ರಾಮಸ್ಥರಾದ ಕೆ.ರಾಜೇಶ್, ಶಾರದಾ, ವರಲಕ್ಷ್ಮೀ, ನವಣೆಪಾಟಿ, ಈಶ್ವರ್ ಇತರರು ಒತ್ತಾಯಿಸಿದ್ದಾರೆ.
ಗ್ರಾಪಂ ಸದಸ್ಯೆ ಸಂಧ್ಯಾರಾಣಿ ಪ್ರತಿಕ್ರಿಯಿಸಿ, ಶಾಸಕರು ಅಂದಾಜು 99ಲಕ್ಷ ರೂ.ಗಳಲ್ಲಿ ನಂ.2ಮುದ್ದಾಪುರದ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಭೂಮಿಪೂಜೆ ನೆರವೇರಿಸಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಶಾಸಕರ ಗಮನಕ್ಕೆ ತಂದು ತುರ್ತಾಗಿ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸುವುದಾಗಿ ಭರವಸೆ ನೀಡಿದ್ದಾರೆ.

ಈಗಾಗಲೇ ಭೂಮಿಪೂಜೆ ಮಾಡಲಾದ ಆರ್.ಕೊಂಡಯ್ಯಕ್ಯಾಂಪ್-ನಂ.2ಮುದ್ದಾಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಹಾಲಹರವಿ ಶೇಷಗಿರಿ

ಪಿಡಿಒ, ಸಣಾಪುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net