

ಚಿಂತಾಮಣಿ: ತಾಲೂಕಿನ ಕೈವಾರದಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಶುಕ್ರವಾರ ಬೆಳಗ್ಗೆಯೇ ಕಾರ್ಯಪ್ರವೃತ್ತರಾದ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಹಲವು ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡುವಲ್ಲಿ ಯಶಸ್ವಿಯಾದರು.
ಕೈವಾರ ಪವಿತ್ರ ಯಾತ್ರಾಸ್ಥಳವಾಗಿದ್ದು, ಪ್ರತಿದಿನ ಈ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಆದರೆ, ಕೆಲ ಅಂಗಡಿ ಮಾಲೀಕರು ಮುಖ್ಯರಸ್ತೆ, ಚರಂಡಿ, ಪಾದಚಾರಿ ರಸ್ತೆ ಸೇರಿ ಸಿಕ್ಕ ಖಾಲಿ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪಂಚಾಯಿತಿ ಅಧಿಕಾರಿಗಳು ಒತ್ತುವರಿ ತೆರವು ಬಗ್ಗೆ ಕರಪತ್ರ ಮತ್ತು ಧ್ವನಿವರ್ಧಕಗಳ ಮೂಲಕ ಪ್ರಚಾರದ ಮೂಲಕ ಒತ್ತುವರಿದಾರರಿಗೆ ಎಚ್ಚರಿಕೆ ನೀಡಿ ಶುಕ್ರವಾರ ಕಾರ್ಯಾಚರಣೆ ನಡೆಸಿದರು.
ಗ್ರಾಪಂ ಪಿಡಿಒ ಕರಿಬಸಪ್ಪ, ಕಾರ್ಯದರ್ಶಿ ಕೃಷ್ಣಪ್ಪ ಮತ್ತು ಬಿಲ್ ಕಲೆಕ್ಟರ್ ಚನ್ನಪ್ಪ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಕೈವಾರ ಬಸ್ ನಿಲ್ದಾಣದಲ್ಲಿ ಹಾಲಿ ಗ್ರಾಮ ಪಂಚಾಯಿತಿ ನೂತನ ಕಚೇರಿ ಮುಂಭಾಗದಲ್ಲಿರುವ ಹಾಪ್‌ಕಾಮ್ಸ್ ಕಟ್ಟಡ, ಶ್ರೀ ಯೋಗಿನಾರೇಯಣ ತಾತಯ್ಯನವರ ಮಠದ ಎದುರು ರಸ್ತೆ, ಬಸ್ ನಿಲ್ದಾಣ ರಸ್ತೆ ಮುತ್ತು ಬೆಂಗಳೂರು ರಸ್ತೆಗೆ ಸಂಪರ್ಕಿಸುವ ಮುಖ್ಯರಸ್ತೆಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಒತ್ತುವರಿ ತೆರವಿಗೆ ಅಡ್ಡಿಪಡಿಸುವುದಿಲ್ಲ. ಚರಂಡಿ ನಂತರ ಪಾದಚಾರಿ ಮಾರ್ಗವನ್ನು ಗುರುತು ಮಾಡಿಕೊಡಿ ಎಂದು ಕೆಲ ವ್ಯಾಪಾರಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧಿಕಾರಿಗಳು, ಚರಂಡಿ ನಂತರ ಪಾದಚಾರಿ ಮಾರ್ಗ ಬಿಟ್ಟು ಜಾಗ ಇದ್ದರೆ ಅಂಗಡಿ ನಡೆಸಿ, ಇಲ್ಲವಾದರೆ ಸಂಪೂರ್ಣ ತೆರವು ಮಾಡುವುದಾಗಿ ತಿಳಿಸಿದರು. ಕಾರ್ಯಾಚರಣೆಯಲ್ಲಿ ಎಎಸ್‌ಐ ಪ್ರಕಾಶ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಅಧಿಕಾರಿಗಳಿಗೆ ಗ್ರಾಮಸ್ಥರ ಕೃತಜ್ಞತೆ
ಕೈವಾರದಲ್ಲಿ ನಡೆಯುವ ಜಾತ್ರೆ, ಸಭೆ ಸಮಾರಂಭ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಒತ್ತುವರಿಯಿಂದ ಜನ ಹಾಗೂ ವಾಹನ ಓಡಾಟಕ್ಕೆ ಸಮಸ್ಯೆಯಾಗಿತ್ತು. ಈಗ ಗ್ರಾಪಂ ವತಿಯಿಂದ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡ ಅಧಿಕಾರಿಗಳಿಗೆ ಗ್ರಾಪಂ ಹಾಲಿ ಮತ್ತು ಮಾಜಿ ಸದಸ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.
17.ಸಿ.ಎಂ.ವೈ.2. ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದಲ್ಲಿ ಒತ್ತುವರಿ ತೆರವಿಗೆ ಸೂಚಿಸುತ್ತಿರುವ ಗ್ರಾಮ ಪಂಚಾಯಿತಿ ಪಿಡಿಓ ಕರಿಬಸಪ್ಪ.
17.ಸಿ.ಎಂ.ವೈ.3. ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದಲ್ಲಿ ಚರಂಡಿ, ರಸ್ತೆ ಮತ್ತು ಪಾದಚಾರಿ ಒತ್ತುವರಿ ತೆರವು ಮಾಡಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು.
17.ಸಿ.ಎಂ.ವೈ.4. ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಾಪ್‌ಕಾಮ್ಸ್ ಕಟ್ಟಡವನ್ನು ತೆರವು ಮಾಡುತ್ತಿತರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು.