ನದಿಯಲ್ಲಿ ನೀರಿದ್ದರೂ ಸಂಗ್ರಹ ಸಾಧ್ಯವಿಲ್ಲ

1
ಗೌರಿಬಿದನೂರು ತಾಲೂಕಿನ ದೊಡ್ಡ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದುರ ಕಾಲನಿ ಬಳಿ ಇರುವ ಚೆಕ್‌ಡ್ಯಾಂ ಬಳಿ ವಿವಿಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಉತ್ತರ ಪಿನಾಕಿನಿ ಚೆಕ್ ಡ್ಯಾಂ ದುರಸ್ತಿಗೆ ರೈತರ ಪಟ್ಟು ರಸ್ತೆ ಸೌಲಭ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಗೌರಿಬಿದನೂರು: ಕಸಬಾ ಹೋಬಳಿ ದೊಡ್ಡಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದುರಾ ಕಾಲನಿ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ 10 ವರ್ಷದ ಹಿಂದೆ ನಿರ್ಮಾಣ ಮಾಡಿದ್ದ ಚೆಕ್‌ಡ್ಯಾಂ ಕಳೆದ ಬಾರಿ ನದಿ ತುಂಬಿ ಹರಿದಾಗ ಕೊಚ್ಚಿಹೋಗಿದೆ. ಈಗ ನದಿ ತುಂಬಿದ್ದರೂ ಡ್ಯಾಂನಲ್ಲಿ ನೀರು ಸಂಗ್ರಹವಾಗದೆ ವ್ಯರ್ಥವಾಗಿ ಹರಿಯುತ್ತಿದೆ ಎಂದು ಸುತ್ತಮುತ್ತಲ ಭಾಗದ ರೈತರು ಮತ್ತು ಗ್ರಾಮಸ್ಥರು ಚೆಕ್ ಡ್ಯಾಂ ಬಳಿ ಶನಿವಾರ ಪ್ರತಿಭಟಿಸಿದರು.

ಪಿನಾಕಿನಿ ಜಲ ಸಮೃದ್ಧಿ ಜಲ ಸಂಘದ ಎ.ಸಿ.ಅಶ್ವತಯ್ಯ ಮಾತನಾಡಿ, ಈ ಹಿಂದೆ ಗ್ರಾಮದ ಜಮೀನುಗಳಿಗೆ ಹೋಗಲು ರಸ್ತೆ ಇರಲಿಲ್ಲ. ಸಂಘ ಕಟ್ಟಿಕೊಂಡು ಚಂದಾ ವಸೂಲಿ ಮಾಡಿ ಎರಡು ಕಡೆ ರಸ್ತೆ ಮಾಡಿಕೊಂಡಿದ್ದೇವೆ. ಈ ರಸ್ತೆ ಮಳೆಯಿಂದ ಹಾಳಾಗಿದೆ. ನದಿ ಹರಿಯುತ್ತಿರುವುದರಿಂದ 50ಕ್ಕೂ ಹೆಚ್ಚು ರೈತರು ಬೆಳೆದ ಬೆಳೆಗಳನ್ನು ಸಾಗಿಸಲು ರಸ್ತೆ ಇಲ್ಲದಾಗಿದೆ. ವೈಜ್ಞಾನಿಕವಾಗಿ ಚೆಕ್ ಡ್ಯಾಂ ನಿರ್ಮಿಸಿದರೆ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ 3 ವರ್ಷಕ್ಕೆ ಆಗುವಷ್ಟು ಕುಡಿಯುವ ನೀರು ಸಿಗುತ್ತದೆ. ಇಲ್ಲವಾದರೆ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ರೈತರ ಹೊಲಕ್ಕೆ ಹೋಗಲು ರಸ್ತೆ ಮತ್ತು ಚೆಕ್‌ಡ್ಯಾಂ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಶಿರಸ್ತೇದಾರ್ ಕಬೀರ್ ಭೇಟಿ ನೀಡಿ ರೈತರ ಮನವಿ ಪತ್ರ ಸ್ವೀಕರಿಸಿದರು.

ಗ್ರಾಮದ ಶ್ರೀನಿವಾಸ್, ಕೆ. ಸತ್ಯನಾರಾಯಣ, ಆದಿಯಪ್ಪ, ಎನ್.ರಂಗಪ್ಪ, ಮಂಜುನಾಥ್, ರಂಗ, ನಾರಾಯಣಪ್ಪ, ಜಿ.ಎನ್.ನಾಗರಾಜ್, ಶಂಕ್ರಪ್ಪ, ಅಶ್ವತ್ಥನಾರಾಯಣ್, ಗುರ್ಕಾ ರಾಮಾಂಜಿ,

ಅಶ್ವತ್ಥ ಮತ್ತು ಗ್ರಾಮ ಆಡಳಿತ ಅಧಿಕಾರಿ ಮಹೇಶ್, ಪಿಎಸ್‌ಐ ರಮೇಶ್ ಗುಗ್ಗರಿ ಮತ್ತು ಸಿಬ್ಬಂದಿ ಹಾಜರಿದ್ದರು.

ಅಧಿಕಾರಿಗಳು ಸ್ಥಳ ಪರಿಶೀಲಿಸಲಿ

ಗ್ರಾಪಂ ಮಾಜಿ ಸದಸ್ಯ ಡಿ.ಡಿ.ಸತ್ಯನಾರಾಯಣ ಮಾತನಾಡಿ, ದೊಡ್ಡ ಕುರುಗೋಡು, ಹಾಲಗಾನಹಳ್ಳಿ, ಕದಿರೇನಹಳ್ಳಿ, ನಾಗಸಂದ್ರ, ಹುದೂತಿ, ಗೌಡಸಂದ್ರ, ವಿದುರಾಶ್ವತ್ಥ ಭಾಗಗಳಲ್ಲಿ ವಾಸವಿರುವ ನಾವು ಪುಣ್ಯ ಸ್ಥಳದಲ್ಲಿ ಹುಟ್ಟಿದ್ದು ಮಾಜಿ ಶಾಸಕರ ಅವಧಿಯಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಆದರೆ, ಅದು ಕಳಪೆ ಕಾಮಗಾರಿಯಾಗಿ ನೀರಿನಲ್ಲಿ ಕೊಚ್ಚಿ ಹೋಗಿ 10 ಅಡಿಯಷ್ಟು ಗುಂಡಿ ಬಿದ್ದು ಡ್ಯಾಂ ದುಸ್ಥಿತಿ ತಲುಪಿದೆ. ಇದರ ಬಗ್ಗೆ ದಾಖಲೆ ಸಮೇತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ನದಿ ಪಾತ್ರದಲ್ಲಿ ಗಿಡಗಂಟಿ ಬೆಳೆದು ನಿಂತಿವೆ. ರೈತರ ಹೊಲಕ್ಕೆ ಹೋಗಲು ರಸ್ತೆ ಕಲ್ಪಿಸಿ ಕೊಡಬೇಕು ಮತ್ತು ಶಾಸಕರಾಗಲೀ, ಜಿಲ್ಲಾಧಿಕಾರಿಗಳಾಗಲೀ, ತಹಸೀಲ್ದಾರ್ ಆಗಲೀ ಸ್ಥಳಕ್ಕೆ ಭೇಟಿ ನೀಡಿ ರೈತರ ಕಷ್ಟ ವೀಕ್ಷಿಸಬೇಕು ಹಾಗೂ ಚೆಕ್ ಡ್ಯಾಂ ಮತ್ತು ಜಮೀನುಗಳಿಗೆ ಹೋಗಲು ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net