ಕಾಲು ಜಾರಿದ್ರೆ ದೇವ್ರೇ ಗತಿ! ವರ್ಷ ಕಳೆದರೂ ಈಡೇರದ ಕಾಲುಸಂಕ ಬೇಡಿಕೆ, ಸಮಸ್ಯೆ ಪರಿಗಣಿಸದ ಇಲಾಖೆ

bridge
ಗ್ರಾಮೀಣ ಭಾಗದ ಜನರು ನಿರ್ಮಿಸಿಕೊಂಡ ತಾತ್ಕಾಲಿಕ ಮರದ ಕಾಲುಸಂಕ
Published on

ನರಸಿಂಹ ನಾಯಕ್ ಬೈಂದೂರು

ಈ ಬಾರಿ ಮಳೆಗಾಲ ಆರಂಭಗೊಳ್ಳುವ ಸೂಚನೆ ನೀಡಿದೆ. ನದಿ, ಕೆರೆಗಳು ತುಂಬುವ ಹಂತದಲ್ಲಿದೆ. ಆದರೆ ಬೈಂದೂರು ಗ್ರಾಮೀಣ ಭಾಗದ ಬಹುತೇಕ ಕಾಲುಸಂಕ ನಿರ್ಮಾಣದ ಕನವರಿಕೆಯಲ್ಲೆ ಬೇಸಿಗೆ ಕಳೆದುಬಿಟ್ಟಿದೆ. ಇಲಾಖೆ, ಜನಪ್ರತಿನಿಧಿಗಳು ಪರಸ್ಪರ ಒಬ್ಬರಿಗೊಬ್ಬರನ್ನು ಬೆರಳು ತೋರಿಸಲು ಆರಂಭಿಸಿದ್ದಾರೆ. ಮಕ್ಕಳ ಪಾಲಕರಿಗೆ ಆತಂಕದ ದಿನಗಳು ಎದುರಾಗಿದೆ.

ಕಳೆದ ವರ್ಷ ಕಾಲ್ತೋಡು ಗ್ರಾಮದ ಬಾಲಕಿ ಶಾಲೆಯಿಂದ ಹಿಂದಿರುವ ವೇಳೆ ಶಿಥಿಲ ಕಾಲುಸಂಕದಿಂದ ಬಿದ್ದು, ನದಿ ಪಾಲಾಗಿದ್ದಳು. ಬಳಿಕ ಸರ್ಕಾರ, ಅಧಿಕಾರಿಗಳು ಸಾಲು ಸಾಲಾಗಿ ಸಾಂತ್ವನದ ಜತೆಗೆ ಈ ಭಾಗದ ಕಾಲುಸಂಕಗಳ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಹತ್ತಾರು ವರ್ಷಗಳ ಬೇಡಿಕೆ

ಬೈಂದೂರು ಭಾಗದಲ್ಲಿ ಕಾಲುಸಂಕದ ಸಮಸ್ಯೆ ಇಂದು ನಿನ್ನೆಯದಲ್ಲ. ಹತ್ತಾರು ವರ್ಷಗಳಿಂದ ಬಹುತೇಕ ಕಡೆ ಇದರ ಬೇಡಿಕೆಯಿತ್ತು. ಯಡ್ತರೆ ಗ್ರಾಮದ ಗಂಗನಾಡು, ನಿರೋಡಿ, ಕಾಲ್ತೋಡು ಭಾಗದ ಹೊಸೇರಿ, ಸಾಂತೇರಿ, ವಸ್ರೆ, ಬ್ಯಾಟಿಯಾಣಿ, ಮದುಕೊಡ್ಲು, ಚಪ್ಪರಕಿ, ಕಪ್ಪಾಡಿ, ಮುರೂರು, ಗುಂಡುಬಾಣ ಮೊದಲಾದ ಕಡೆ ಬಹುತೇಕ ಮನೆಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ನದಿದಾಟಿ ಬರಬೇಕು. ಇಲ್ಲವಾದರೆ ಹತ್ತಾರು ಕಿ.ಮೀ ಸುತ್ತು ಬಳಸಿ ಬರಬೇಕಾಗಿದೆ. ಒಂದೆಡೆ ಕೃಷಿ ಚಟುವಟಿಕೆ ಇದರ ನಡುವೆ ನಿಗದಿತ ಸಮಯಕ್ಕೆ ಮಕ್ಕಳನ್ನು ಶಾಲೆಗೆ ಕರೆತರಬೇಕಾದ ಜವಾಬ್ದಾರಿ. ಹೀಗಾಗಿ ಮಕ್ಕಳು ಮನೆಗೆ ಬರುವವರೆಗೆ ಪಾಲಕರು ಆತಂಕದಿಂದ ದಿನ ಕಳೆಯಬೇಕಾಗಿದೆ.

ಸ್ಪಂದಿಸದ ಇಲಾಖೆ

ಹಳ್ಳಿಗಳಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳು ಮರದ ಕೊಂಬೆ ಮೇಲೆ ಮಕ್ಕಳನ್ನು ಕಳುಹಿಸುವ ಸರ್ಕಸ್ ಸ್ಥಳೀಯರಿಗೆ ಸರ್ವೇ ಸಾಮಾನ್ಯ. ಆದರೆ ಇಲಾಖೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾಲ್ತೋಡು ಸಮೀಪ ಕಳೆದ ವರ್ಷ ಮಗು ಕೊಚ್ಚಿ ಹೋದ ಬಳಿಕ ಅಲ್ಲಿ ಒಂದು ಕಾಲುಸಂಕ ನಿರ್ಮಾಣಗೊಂಡಿದೆ. ಉಳಿದ ಕಡೆ ಈವರೆಗೆ ಕೆಲಸ ನಡೆದಿಲ್ಲ. ಅಪಾಯ ನಡೆದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಜಾಗ್ರತೆ ವಹಿಸಬೇಕಾಗಿದೆ.

ಸ್ಥಳೀಯರಿಂದಲೇ ಕಾಲುಸಂಕ ನಿರ್ಮಾಣ

ಇಲ್ಲಿನ ಸಾತೇರಿ, ಹೊಸೇರಿ ಪ್ರದೇಶದಲ್ಲಿ ಸರ್ಕಾರ ಗಮನ ಹರಿಸದ ಪರಿಣಾಮ ಸ್ಥಳೀಯರು ಶ್ರಮದಾನದ ಮೂಲಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಮರದ ದಿಮ್ಮಿಗಳಿಂದ ನಿರ್ಮಿಸಿದ ಈ ತಾತ್ಕಾಲಿಕ ಕಾಲುಸಂಕ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಜಿಲ್ಲಾಡಳಿತ ಸ್ಪಂದಿಸದಿರುವುದು ಆತಂಕಕ್ಕೆ ಒಳಪಡುವ ವಿಚಾರವಾಗಿದೆ. ಕೇವಲ ಆಶ್ವಾಸನೆ ನೀಡುವುದು ಬಿಟ್ಟರೆ ಕಾಮಗಾರಿ ನಡೆದಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ. ಜಿಲ್ಲಾಡಳಿತ ಗ್ರಾಮೀಣ ಭಾಗದ ಜನರ ಆಶೋತ್ತರಗಳನ್ನು ತಕ್ಷಣ ಈಡೇರಿಸಬೇಕಿದೆ.

ಅರುಣಾಚಲಂ ಟ್ರಸ್ಟ್‌ನಿಂದ ಹಂತ ಹಂತವಾಗಿ ಸುಮಾರು 50 ಕಾಲುಸಂಕ ನಿರ್ಮಾಣ ಭರವಸೆ ನೀಡಿದ್ದಾರೆ. ಪ್ರಸ್ತುತ ಅತಿ ಅಗತ್ಯವಾಗಿ ಮೂರು ಕಡೆಗಳಲ್ಲಿ ಕಾಲುಸಂಕ ಸಿದ್ಧವಾಗಲಿದೆ. ಕ್ಷೇತ್ರದ ಜನತೆ ಕಾಲುಸಂಕ ಇಲ್ಲದೆ ಸಮಸ್ಯೆ ಆಗಬಾರದು ಎಂಬ ಸದುದ್ದೇಶದಿಂದ ಅರುಣಾಚಲಂ ಟ್ರಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡು ತುರ್ತು ಅಗತ್ಯವಿರುವ ಕೆಲವೆಡೆ ಕಾಲುಸಂಕ ನಿರ್ಮಾಣ ಮಾಡುತ್ತಿದ್ದೇವೆ. ನವೀನ ಆವಿಷ್ಕಾರದೊಂದಿಗೆ ಕಾಲುಸಂಕ ನಿರ್ಮಾಣವಾಗುತ್ತಿದೆ.-ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು

ಕಳೆದ ಹಲವು ವರ್ಷಗಳಿಂದ ಕಾಲುಸಂಕ ನಿರ್ಮಿಸಲು ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮಸ್ಯೆಯಾಗುತ್ತಿದೆ. ಸರ್ಕಾರ ಇಲ್ಲಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕಿದೆ.-ಆನಂದ ಪೂಜಾರಿ, ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net