ಏರಿ ಒಡೆದು 2 ವರ್ಷಕಳೆದರೂ ದುರಸ್ತಿ ಇಲ್ಲ

ಏರಿ ಒಡೆದು 2 ವರ್ಷಕಳೆದರೂ ದುರಸ್ತಿ ಇಲ್ಲ
Published on

ಅರಸೀಕೆರೆ: ತಾಲೂಕಿನ ಕಾಟೀಕೆರೆ ಗ್ರಾಮದ ಕೆರೆ ಏರಿ ಒಡೆದು ಅಪಾರ ನಷ್ಟ ಸಂಭವಿಸಿ ಎರಡು ವರ್ಷ ಕಳೆದರೂ ದುರಸ್ತಿ ಮಾಡದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಪೂರ್ವ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಅಧಿಕಾರಿಗಳ ನಿರ್ಲಕ್ಷೃದಿಂದ ಕೆರೆ ಭರ್ತಿಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಗ್ರಾಮಸ್ಥರು, ರೈತಸಂಘ ಸೇರಿದಂತೆ ಪ್ರಗತಿಪರ ಒಕ್ಕೂಟ ಹೋರಾಟಕ್ಕೆ ಸಜ್ಜಾಗಿವೆ.

ಬಿಸಿಲ ಬೇಗೆಗೆ ತತ್ತರಿಸಿದ್ದ ಭೂಮಿ ಕೊಂಚ ತಣ್ಣಗಾಗಿದೆ. ಸದ್ಯದಲ್ಲೇ ಮಾನ್ಸೂನ್ ರಾಜ್ಯ ಪ್ರವೇಶಿಸುವ ಸುಳಿವು ದೊರೆತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಲ್ಲಿ ಕೆರೆ, ಕಟ್ಟೆಗಳು ಜೀವಕಳೆ ಪಡೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ, ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕಾಟೀಕೆರೆ ಕೆರೆ ಏರಿ ದುರಸ್ತಿಯಾಗದ ಹಿನ್ನ್ನೆಲೆ ಈ ಬಾರಿಯೂ ನೀರು ಸಂಗ್ರಹವಾಗುವುದಿಲ್ಲ ಎನ್ನುವ ಆತಂಕ ಮನೆಮಾಡಿದೆ. ಇದರಿಂದ ಈ ಭಾಗದ ಸಾಕಷ್ಟು ರೈತರು ಸಮಸ್ಯೆ ಎದುರಿಸಬೇಕಾಗಿದೆ.

ಕೆರೆ ಏರಿ ಒಡೆದ ಪರಿಣಾಮ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಹೋಗಿದ್ದು, ದೊಡ್ಡ ನಷ್ಟ ಸಂಭವಿಸಿದೆ. ಕೆರೆ ಕಿರಿದಾಗಿದ್ದರೂ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳುವ ಸಾಮರ್ಥ್ಯ ಹೊಂದಿದೆ. ಎರಡು ವರ್ಷದಿಂದ ನೀರು ನಿರಂತರವಾಗಿ ಹರಿದು ಹೋಗುತ್ತಿರುವುದರಿಂದ ಜನ, ಜಾನುವಾರುಗಳಿಗೆ ಬಳಕೆಗೆ ನೀರು ಲಭ್ಯವಾಗುತ್ತಿಲ್ಲ. ಅಲ್ಲದೆ ಸುತ್ತಮುತ್ತಲಿನ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಜಲ ಕ್ಷಾಮವನ್ನು ತಂದೊಡ್ಡಿದೆ. ಜನ ಸಾಮಾನ್ಯರ ಭಕ್ತಿಯ ಗೌರಿ-ಗಣೇಶ ವಿಸರ್ಜನೆಗೂ ಅವಕಾಶವಿಲ್ಲದಂತಾಗಿದ್ದು, ಸ್ಥಳೀಯರಲ್ಲಿ ಅಸಮಾಧಾನ ಉಂಟುಮಾಡಿದೆ.

ಕೆರೆ ಏರಿ ಒಡೆದಿರುವುದರಿಂದ ನೀರು ಸಂಗ್ರಹವಾಗದೆ ಏರಿಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದ ಗಿಡಗಂಟಿಗಳು ಬೆಳೆದಿವೆ. ಪಾದಚಾರಿಗಳು ಏರಿ ಮೇಲೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಾಡುಹಂದಿ, ಚಿರತೆ, ಕರಡಿಗಳಿಗೂ ಇದು ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಮುಂದೆ ಬಾರದ ಗುತ್ತಿಗೆದಾರ: ಜಿಲ್ಲಾ ಪಂಚಾಯಿತಿ ವತಿಯಿಂದ ಕೆರೆ ಏರಿ ದುರಸ್ತಿಗೆ ಅಂದಾಜು 60 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ಇದೀಗ ಕೆರೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿರುವುದರಿಂದ ಕೆರೆ ಅಭಿವೃದ್ಧಿ ಯೋಜನೆಯಡಿ ಕೇವಲ ಹದಿನೈದು ಲಕ್ಷ ರೂ. ಮಾತ್ರ ಮೀಸಲಿರಿಸಲಾಗಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಆದ್ದರಿಂದ ಕಾಮಗಾರಿ ನಿರ್ವಹಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಇಲಾಖೆಗಳ ಸಮನ್ವಯದ ಕೊರತೆ, ಅಧಿಕಾರಿಗಳ ಅಸಡ್ಡೆ, ಅನುದಾನದ ಕೊರತೆ ನೆಪ ಹೇಳಿಕೊಂಡು ಜನಸಾಮಾನ್ಯರ ಸಮಸ್ಯೆ ಬಗೆಹರಿಸದಿರುವುದು ವಿಪರ್ಯಾಸವೇ ಸರಿ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net