

ಬೆಂಗಳೂರು ಸಂಶೋಧನೆ ಮತ್ತು ಅಧ್ಯಯನವನ್ನು ಮತ್ತಷ್ಟು ಉತ್ತೇಜಿಸಲು ಬೆಂಗಳೂರು ವಿಶ್ವವಿದ್ಯಾಲಯವು ‘ಬೌದ್ದಿಕ ಆಸ್ತಿ ಹಕ್ಕುಗಳ ಕೋಶ’ವನ್ನು ಸ್ಥಾಪಿಸಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ವಿಶ್ವವಿದ್ಯಾಲಯದಲ್ಲಿರುವ ಶೈಕ್ಷಣಿಕ ಸಂಶೋಧನೆ ಮತ್ತು ಅಧ್ಯಯನವನ್ನು ಅಭಿವೃದ್ಧಿಪಡಿಸಲು ಈ ಉಪಕ್ರಮ ಸಹಕಾರಿಯಾಗಲಿದೆ.
ವಿಶ್ವವಿದ್ಯಾಲಯದ ತಂತ್ರಜ್ಞಾನ, ವಿಜ್ಞಾನ, ಭೂಗೋಳ, ಸಮಾಜ ವಿಜ್ಞಾನ, ವಾಣಿಜ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. ಅನೇಕ ಸಂಶೋಧಕರು ತಮ್ಮ ಆವಿಷ್ಕಾರ, ಆಲೋಚನೆಗಳಿಗೆ ಪೇಟೆಂಟ್ ಪಡೆದುಕೊಂಡಿದ್ದಾರೆ. ಅಂದಾಜು 70ಕ್ಕೂ ಅಧಿಕ ಪೇಟೆಂಟ್‌ಗಳು ಕಳೆದ 5 ವರ್ಷಗಳಲ್ಲಿ ದಾಖಲಾಗಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ.
ಬೌದ್ದಿಕ ಆಸ್ತಿಯ ಹಕ್ಕು ಕೋಶದಡಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರಿಗೆ ತಮ್ಮ ಆವಿಷ್ಕಾರ, ಸಂಶೋಧನೆಗಳನ್ನು ರಕ್ಷಿಸುವ ಕುರಿತು ಮಾರ್ಗದರ್ಶನ ನೀಡಲಾಗುವುದು. ಹೊಸ ಆವಿಷ್ಕಾರ, ಸಂಶೋಧನೆಗೆ ಐಪಿಆರ್ ಕೋಶದ ವತಿಯಿಂದ ಪೇಟೆಂಟ್, ಟ್ರೇಡ್ ಸೀಕ್ರೆಟ್ಸ್, ಟ್ರೇಡ್ ಮಾರ್ಕ್ ಪಡೆಯಲು ಸಹಕರಿಸಲಾಗುವುದು. ಸರ್ಕಾರಿ ನವೀಕರಣ ಶುಲ್ಕವನ್ನು ಕೋಶದ ವತಿಯಿಂದಲೇ ಭರಿಸಲಾಗುತ್ತದೆ.
ರಾಜ್ಯದಲ್ಲಿ ಉಳಿದ ವಿಶ್ವವಿದ್ಯಾಲಯಗಳಿಗಿಂತ ಹೆಚ್ಚಿನ ಪೇಟೆಂಟ್‌ಗಳನ್ನು ಬೆಂ.ವಿವಿ ಹೊಂದಿದೆ. ಆವಿಷ್ಕಾರ, ಸಂಶೋಧನೆ ಮತ್ತು ಅಧ್ಯಯನದಿಂದ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಿಸಲಾಗಿದೆ. ಸಮಾಜಕ್ಕೆ ಅನುಕೂಲವಾಗುವ ಆವಿಷ್ಕಾರಗಳು ಹೆಚ್ಚಾಗಬೇಕು. ಈ ಅವಕಾಶವನ್ನು ವಿದ್ಯಾರ್ಥಿಗಳು, ಸಂಶೋಧಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. - ಡಾ. ಎಸ್.ಎಂ. ಜಯಕರ್, ಬೆಂ.ವಿವಿ ಕುಲಪತಿ